ಮುಂಬೈ: ಐಷಾರಾಮಿ ವಾಚ್‌ಗಳ ತಯಾರಿಕೆಗೆ ಹೆಸರಾದ ‘ಜಾಕೋಬ್ ಅಂಡ್ ಕೋ’ (Jacob and Co) ಸಂಸ್ಥೆ ಮತ್ತೊಂದು ಅದ್ಭುತ ಪ್ರಾಡಕ್ಟ್‌ನ್ನ ಅನಾವರಣಗೊಳಿಸಿದೆ. ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮಹತ್ವಾಕಾಂಕ್ಷೆಯ ಪ್ರಾಣಿ ಸಂರಕ್ಷಣಾ ಯೋಜನೆಯಾದ ‘ವಂತಾರ’ಕ್ಕೆ (Vantara) ಗೌರವ ಸಲ್ಲಿಸುವ ನಿಟ್ಟಿನಲ್ಲಿ ‘ಒಪೆರಾ ವಂತಾರ ಗ್ರೀನ್ ಕ್ಯಾಮೊ’ (Opera Vantara Green Camo) ಎಂಬ ವಿಶೇಷ ಕೈಗಡಿಯಾರವನ್ನು ಸಿದ್ಧಪಡಿಸಿದೆ. ಜನವರಿ 21, 2026 ರಂದು ಬಿಡುಗಡೆಯಾದ ಈ ವಾಚ್ ಈಗ ಜಗತ್ತಿನ ಗಮನ ಸೆಳೆದಿದೆ.
ಈ ವಾಚ್‌ನ ವಿನ್ಯಾಸ ಅತ್ಯಂತ ವಿಶಿಷ್ಟವಾಗಿದ್ದು, ಡಯಲ್‌ನ ಮಧ್ಯಭಾಗದಲ್ಲಿ ನೀಲಿ ಬಣ್ಣದ ಹೂವಿನ ಶರ್ಟ್ ಧರಿಸಿರುವ ಅನಂತ್ ಅಂಬಾನಿ ಅವರ ಕೈಯಿಂದ ಚಿತ್ರಿಸಿದ ಕಿರು ಪ್ರತಿಕೃತಿಯನ್ನು (Figurine) ಇರಿಸಲಾಗಿದೆ. ಇದರ ಅಕ್ಕಪಕ್ಕದಲ್ಲಿ ವಂತಾರ ಪರಿಸರ ವ್ಯವಸ್ಥೆಯನ್ನು ಪ್ರತಿನಿಧಿಸುವಂತೆ ಸಿಂಹ ಮತ್ತು ಬಂಗಾಳದ ಹುಲಿಯ ನೈಜವೆನಿಸುವಂತಹ ಚಿಕ್ಕ ಶಿಲ್ಪಗಳನ್ನು ಕೆತ್ತಲಾಗಿದೆ. ವಾಚ್‌ಗೆ ಕಾಡಿನ ಲುಕ್ ನೀಡಲು ಹಸಿರು ಬಣ್ಣದ ‘ಕ್ಯಾಮೊಫ್ಲೇಜ್’ ವಿನ್ಯಾಸವನ್ನು ಬಳಸಲಾಗಿದ್ದು, ಇದು ಅನಂತ್ ಅವರ ಪ್ರಕೃತಿ ಪ್ರೇಮಕ್ಕೆ ಹಿಡಿದ ಕನ್ನಡಿಯಂತಿದೆ.
ಅತ್ಯಂತ ಐಷಾರಾಮಿ ವಿನ್ಯಾಸಕ್ಕೆ ಹೆಸರಾದ ಜಾಕೋಬ್ ಅಂಡ್ ಕೋ, ಈ ವಾಚ್ ತಯಾರಿಕೆಯಲ್ಲಿ ಸುಮಾರು 21.98 ಕ್ಯಾರೆಟ್ ತೂಕದ 397 ಅಮೂಲ್ಯ ಹರಳುಗಳನ್ನು ಬಳಸಿದೆ. ಇದರಲ್ಲಿ ಡೆಮಂಟಾಯ್ಡ್ ಗಾರ್ನೆಟ್‌ಗಳು, ತ್ಸಾವೊರೈಟ್‌ಗಳು, ಹಸಿರು ನೀಲಮಣಿಗಳು ಮತ್ತು ಬಿಳಿ ವಜ್ರಗಳು ಸೇರಿವೆ. ಈ ವಾಚ್‌ನ ಬೆಲೆ ಕೇಳಿದರೆ ಎಂಥವರೂ ಹುಬ್ಬೇರಿಸುವಂತಿದೆ. ವಾಚ್‌ಒಪಿಯಾ (Watchopea) ವರದಿಯ ಪ್ರಕಾರ, ಇದರ ಬೆಲೆ ಸುಮಾರು 1.5 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 12.5 ಕೋಟಿ ರೂ. ಆಗಿದೆ.
‘ವಂತಾರ’ ಅಂದರೆ ‘ಕಾಡಿನ ನಕ್ಷತ್ರ’ ಎಂದರ್ಥ. ಗುಜರಾತ್‌ನ ಜಾಮ್‌ನಗರದ ರಿಲಯನ್ಸ್ ರಿಫೈನರಿ ಸಂಕೀರ್ಣದಲ್ಲಿ ಸುಮಾರು 3,500 ಎಕರೆ ಪ್ರದೇಶದಲ್ಲಿ ಹರಡಿರುವ ಈ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವನ್ನು ಮಾರ್ಚ್ 2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 1.5 ಲಕ್ಷಕ್ಕೂ ಅಧಿಕ ಪ್ರಾಣಿಗಳಿಗೆ ಆಶ್ರಯ ನೀಡಿರುವ ಈ ಕೇಂದ್ರವು ಅತ್ಯಾಧುನಿಕ ವನ್ಯಜೀವಿ ಆಸ್ಪತ್ರೆಯನ್ನೂ ಹೊಂದಿದೆ. ಸದ್ಯ ಅನಂತ್ ಅಂಬಾನಿ ಅವರ ಈ ಪ್ಯಾಶನ್ ಪ್ರಾಜೆಕ್ಟ್‌ಗೆ ಟ್ರಿಬ್ಯೂಟ್ ಆಗಿ ನಿರ್ಮಿಸಲಾದ ಈ ದುಬಾರಿ ವಾಚ್, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
