ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಘಟನೆ ಮಾಸುವ ಮುನ್ನವೇ ಕಿಡಿಗೇಡಿಗಳು ಮತ್ತೊಂದು ಕೃತ್ಯವೆಸಗಿದ್ದಾರೆ. ಶುಕ್ರವಾರ ಬೆಳಗ್ಗೆ ಗಣೇಶೋತ್ಸವದ ಅಂಗವಾಗಿ ಅಲಂಕೃತಗೊಳಿಸಲಾಗಿದ್ದ ಪೆಂಡಾಲ್ ಮೇಲೆ ಕಲ್ಲು ಎಸೆಯಲಾಗಿದ್ದು, ಭಟ್ಕಳದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಭಟ್ಕಳ ತಾಲೂಕು ರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಲೀಪನ್ ಅವರಿಗೆ ಅಧಿಕೃತ ದೂರು ಮತ್ತು ಮನವಿ ಸಲ್ಲಿಸಲಾಗಿದೆ.
ಕಳೆದ 43 ವರ್ಷಗಳಿಂದ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಸರ್ವೆ ನಂಬರ್ 573 ಬಿಯಲ್ಲಿನ ಸುಮಾರು 10 ಗುಂಟೆ ಜಾಗದಲ್ಲಿ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶುಕ್ರವಾರ (ಸೆಪ್ಟೆಂಬರ್ 18) ಸಂಜೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಆಯೋಜಿಸಲಾಗಿತ್ತು.
ಆದರೆ, ಇದೇ ದಿನ ಬೆಳಗ್ಗೆ ಸುಮಾರು 7.20 ರ ವೇಳೆಗೆ ಪಕ್ಕದ ಅಂಜುಮನ್ ಶಾಲೆಯ ಮೈದಾನದ ಕಡೆಯಿಂದ ಬಂದ ಕಿಡಿಗೇಡಿಗಳು ಗಣೇಶೋತ್ಸವದ ಮೇಲ್ಟಾವಣಿಯ ತಗಡಿನ ಶೀಟ್ ಮೇಲೆ 3 ರಿಂದ 4 ಕಲ್ಲುಗಳನ್ನು ಎಸೆದಿದ್ದಾರೆ. ಕಲ್ಲುಗಳು ಮೇಲ್ಟಾವಣಿಯ ಮೇಲೆ ಬಿದ್ದು ಕೆಳಗೆ ಜಾರಿದ್ದು, ಅದೃಷ್ಟವಶಾತ್ ಸ್ಥಳದಲ್ಲಿದ್ದ ಆಟೋ ಚಾಲಕರು ಹಾಗೂ ಗಣೇಶೋತ್ಸವ ಸಮಿತಿಯ ಸದಸ್ಯರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪವಿತ್ರ ಹಬ್ಬದ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಈ ಕೃತ್ಯದಿಂದ ಗಣೇಶೋತ್ಸವ ಆಯೋಜಕರಲ್ಲಿ ತೀವ್ರ ಬೇಸರ ಹಾಗೂ ಆಕ್ರೋಶ ಮನೆಮಾಡಿದೆ. ಕಲ್ಲು ಎಸೆದ ದುಷ್ಕರ್ಮಿಗಳನ್ನು ತಕ್ಷಣವೇ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಜೊತೆಗೆ, ಶುಕ್ರವಾರ ಸಂಜೆ 6.30 ಕ್ಕೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಟ್ರಸ್ಟ್ ಆಗ್ರಹಿಸಿದೆ.
ಮೆರವಣಿಗೆ ಸಾಗುವ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆಯೂ ಭಟ್ಕಳ ತಾಲೂಕು ರಿಕ್ಷಾ ಚಾಲಕರ-ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗಣಪತಿ ನಾಯ್ಕ ಹಾಗೂ ರಿಕ್ಷಾ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ನೇತೃತ್ವದಲ್ಲಿ ಇಲಾಖೆಗೆ ಕೋರಲಾಗಿದೆ.
