ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ಐತಿಹಾಸಿಕ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಭಾಗದ ಜನತೆಗೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಮಹತ್ವದ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಪಕ್ಷ ಭೇದ ಮರೆತು ಸರ್ಕಾರಕ್ಕೆ ಸಹಕಾರ ನೀಡಿದ ಕರಾವಳಿಯ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಸಂಪುಟ ಸಭೆಯಲ್ಲಿ ಒಟ್ಟು 60 ಪ್ರಮುಖ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಬರೋಬ್ಬರಿ 32,612 ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದಾರೆ.
ಕರಾವಳಿಗರ ಬಹುದಿನಗಳ ಬೇಡಿಕೆಯಾಗಿದ್ದ ತುಳು ಭಾಷೆಗೆ ಕೊನೆಗೂ ಅಧಿಕೃತ ಮನ್ನಣೆ ಸಿಕ್ಕಿದ್ದು, ರಾಜ್ಯದ 2 ನೇ ಅಧಿಕೃತ ಭಾಷೆಯಾಗಿ ತುಳುವನ್ನು ಘೋಷಿಸಲಾಗಿದೆ. ಈ ನಿರ್ಧಾರವು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗಲಿದ್ದು, ಹಿಂದಿನ ಸರ್ಕಾರಗಳು ಮಾಡದ ಕೆಲಸವನ್ನು ನಾವು ಮಾಡಿ ತೋರಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ಹೆಮ್ಮೆಯಿಂದ ನುಡಿದರು.
ಇದರ ಜೊತೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಜಿಲ್ಲೆಯ ಹೆಸರನ್ನು ಬದಲಾಯಿಸಬೇಕು ಎಂಬುದು ಸರ್ಕಾರದ ಮನಸ್ಸಿನಲ್ಲಿದ್ದರೂ, ಈ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಶಿಕ್ಷಣ, ಮೂಲಸೌಕರ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೂ ಸಂಪುಟ ಸಭೆಯಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ. ಬಹುನಿರೀಕ್ಷಿತ ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು ಎಂದಿದ್ದು, ಇದಕ್ಕಾಗಿ 579.49 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಮಂಗಳೂರಿನಲ್ಲಿ ನೂತನ ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಪುತ್ತೂರಿನ ವಿಟ್ಲ ನೀರಾವರಿ ಯೋಜನೆಗೆ 100 ಕೋಟಿ ರೂಪಾಯಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ರಸ್ತೆಗಳ ಅಭಿವೃದ್ಧಿಗಾಗಿ 14,000 ಕೋಟಿ ರೂಪಾಯಿ ಹಾಗೂ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನವನ್ನು ಪ್ರಕಟಿಸಲಾಗಿದೆ.
ಮಲೆನಾಡು ಮತ್ತು ಕರಾವಳಿ ಭಾಗವನ್ನು ಒಳಗೊಂಡಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಟೂರಿಸಂ ಪಾಲಿಸಿಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ತಮ್ಮ ಸರ್ಕಾರವು ಎಂದಿಗೂ ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಬದಲಾಗಿ ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಇದೇ ವೇಳೆ ಮಾರ್ಮಿಕವಾಗಿ ನುಡಿದರು.
