S Shorts

ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಲಿಯಾಯ್ತಾ ಮತ್ತೊಂದು ಜೀವ; ವಿಜಯನಗರ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು!

ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಲಿಯಾಯ್ತಾ ಮತ್ತೊಂದು ಜೀವ; ವಿಜಯನಗರ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವು!
Author: Meghana Gowda
Posted By: Meghana Gowda
Updated: May 30, 2026 | 10:33 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಧಿಕಾರಿಗಳ ಸಾಲು ಸಾಲು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಅಮಾಯಕ ಸಾರ್ವಜನಿಕರು ಬಲಿಯಾಗುತ್ತಿರುವುದು ಮುಂದುವರಿದಿದೆ. ವಿಜಯನಗರದಲ್ಲಿ ಕಣ್ಣೆದುರೇ ಇದ್ದ ಶಿಥಿಲಾವಸ್ಥೆಯ ಬೃಹತ್ ಗೋಡೆಯೊಂದು ಕುಸಿದು ಬಿದ್ದು ಆಟೋ ಚಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಸಂಭವಿಸಿದೆ. ಈ ಘಟನೆಯು ಸ್ಥಳೀಯ ಮಹಾನಗರ ಪಾಲಿಕೆ ಮತ್ತು ವಿಜಯನಗರ ಕ್ಲಬ್ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರೆಕ್ಕೆ ಮುರಿದ ಹಕ್ಕಿಯಂತಾಗಿರುವ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. “ಈ ಸಾವಿಗೆ ಹೊಣೆ ಯಾರು? ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಆಟೋ ಚಾಲಕನನ್ನೇ ಕಳೆದುಕೊಂಡ ಮೇಲೆ ನಮ್ಮ ಕುಟುಂಬಕ್ಕೆ ದಿಕ್ಕ್ಯಾರು?” ಎಂದು ಮೃತನ ಸಂಬಂಧಿಕರು ಕಣ್ಣೀರಿಡುತ್ತಾ ಪ್ರಶ್ನಿಸುತ್ತಿದ್ದಾರೆ. ಕೇವಲ ಮಳೆಯ ನೆಪ ಒಡ್ಡಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಈ ಗೋಡೆಯ ತಳಪಾಯ ತೀರಾ ದುರ್ಬಲವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಬರಿಯ ಮಳೆಯಿಂದಲೇ ಇಷ್ಟು ದೊಡ್ಡ ಗೋಡೆ ಕುಸಿಯಲು ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ವಾದವಾಗಿದೆ.

ಬೌರಿಂಗ್ ದುರಂತದಿಂದಲೂ ಪಾಠ ಕಲಿಯದ ಪಾಲಿಕೆ!

ಕಳೆದ ಕೆಲವು ದಿನಗಳ ಹಿಂದಷ್ಟೇ ನಗರದ ಬೌರಿಂಗ್ ಇನ್‌ಸ್ಟಿಟ್ಯೂಟ್ ಗೋಡೆ ಕುಸಿದು ಬಿದ್ದು ಸಾವು ಸಂಭವಿಸಿದ ಭೀಕರ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಸರ್ಕಾರ, ನಗರದಾದ್ಯಂತ ಇರುವ ಇಂತಹ ಅಪಾಯಕಾರಿ, ಹಳೆಯ ಮತ್ತು ಶಿಥಿಲಾವಸ್ಥೆಯಲ್ಲಿರುವ ಗೋಡೆ ಹಾಗೂ ಕಟ್ಟಡಗಳನ್ನು ತಕ್ಷಣವೇ ಸಮೀಕ್ಷೆ ನಡೆಸಿ, ಗುರುತಿಸಿ ತೆರವುಗೊಳಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿತ್ತು.

ಆದರೆ ಸರ್ಕಾರದ ಈ ಖಡಕ್ ಆದೇಶ ಕೇವಲ ಕಾಗದದ ಮೇಲಷ್ಟೇ ಉಳಿದಿರುವುದು ಈಗ ಸಾಬೀತಾಗಿದೆ. ಇಷ್ಟೊಂದು ಜನನಿಬಿಡ ಪ್ರದೇಶದಲ್ಲೇ ಇಂತಹದ್ದೊಂದು ದುರ್ಬಲ ಗೋಡೆ ಇದ್ದರೂ, ಅದನ್ನು ಗುರುತಿಸಿ ನೋಟಿಸ್ ನೀಡಲು ಪಾಲಿಕೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಕಣ್ಣಿಗೆ ರಾಚುತ್ತಿದೆ ಅಧಿಕಾರಿಗಳ ಬೇಜವಾಬ್ದಾರಿತನ!

ವಿಜಯನಗರ ಕ್ಲಬ್‌ನ ಈ ಶಿಥಿಲಾವಸ್ಥೆಯ ಗೋಡೆಯನ್ನು ಪರಿಶೀಲಿಸುವ ಕನಿಷ್ಠ ಸೌಜನ್ಯವನ್ನೂ ಪಾಲಿಕೆ ಅಧಿಕಾರಿಗಳು ತೋರಿಲ್ಲ. ಅಧಿಕಾರಿಗಳ ಈ ಕಣ್ಣಿಗೆ ರಾಚುವಂತಹ ಬೇಜವಾಬ್ದಾರಿತನವೇ ಇಂದು ಆಟೋ ಚಾಲಕನ ಪ್ರಾಣಪಕ್ಷಿ ಹಾರಿಹೋಗಲು ನೇರ ಕಾರಣವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಬಿಬಿಎಂಪಿ ಮತ್ತು ಜಿಬಿಎ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಕ್ಲಬ್ ಆಡಳಿತ ಮಂಡಳಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.