S Shorts

ಕರ್ನಾಟಕದ ನೂತನ CM ಆಯ್ಕೆಗೆ ಕ್ಷಣಗಣನೆ: ಅಜ್ಜಯ್ಯನ ಮೊರೆ ಹೋದ ಡಿಕೆಶಿ, CLP ಸಭೆಗೂ ಮುನ್ನ ರಾಜ್ಯಪಾಲರ ಭೇಟಿ

ಕರ್ನಾಟಕದ ನೂತನ CM ಆಯ್ಕೆಗೆ ಕ್ಷಣಗಣನೆ: ಅಜ್ಜಯ್ಯನ ಮೊರೆ ಹೋದ ಡಿಕೆಶಿ, CLP ಸಭೆಗೂ ಮುನ್ನ ರಾಜ್ಯಪಾಲರ ಭೇಟಿ
Author: Sagaradventure
Posted By: Sagaradventure
Updated: May 30, 2026 | 12:08 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯ ಬೆನ್ನಲ್ಲೇ ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಸ್ವತಃ ಸಿದ್ದರಾಮಯ್ಯ ಅವರೇ ನೀಡಿದ್ದು, ಇಡೀ ರಾಜ್ಯದ ಕಣ್ಣು ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯತ್ತ ನೆಟ್ಟಿದೆ. 

ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲದೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ, ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂಲಕವೇ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಸಭೆಯ ಬಳಿಕ ಅಧಿಕೃತವಾಗಿ ನೂತನ ಮುಖ್ಯಮಂತ್ರಿ ಹಾಗೂ ಪ್ರಮಾಣವಚನದ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.

ಸಿಎಲ್‌ಪಿ ಸಭೆಗೂ ಮುನ್ನವೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್ ಅವರು ಇಂದು ಬೆಳಗ್ಗೆ 10:30 ರ ಸುಮಾರಿಗೆ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಅನೌಪಚಾರಿಕ ಮಾತುಕತೆ ನಡೆಸಿದರು. ಮಧ್ಯಾಹ್ನ 1 ಗಂಟೆಯ ನಂತರ ರಾಜ್ಯಪಾಲರು ಧರ್ಮಸ್ಥಳಕ್ಕೆ ತೆರಳಲಿರುವ ಕಾರಣ, ಡಿಕೆ ಸಹೋದರರು ಮುಂಚಿತವಾಗಿಯೇ ರಾಜಭವನಕ್ಕೆ ತೆರಳಿದ್ದರು. 

ಈ ಭೇಟಿಯ ವೇಳೆ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರದ ತಾತ್ಕಾಲಿಕ ವೇಳಾಪಟ್ಟಿ ಹಾಗೂ ರಾಜ್ಯಪಾಲರ ಲಭ್ಯತೆ ಕುರಿತು ಚರ್ಚೆ ನಡೆಸಲಾಗಿದೆ. ಮೂಲಗಳ ಪ್ರಕಾರ ಜೂನ್ 1, 3, ಮತ್ತು 5 ರ ದಿನಾಂಕಗಳನ್ನು ಪ್ರಸ್ತಾಪಿಸಲಾಗಿದ್ದು, ಜೂನ್ 3 ರಂದು ಸುಮಾರು 12 ರಿಂದ 14 ಶಾಸಕರು ಕೂಡ ಸಚಿವರಾಗಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದೆಡೆ ಆಪ್ತ ಜ್ಯೋತಿಷಿ ದ್ವಾರಕನಾಥ್ ಅವರು ಜೂನ್ 5, 6 ಅಥವಾ 7 ರಂದು ಪದಗ್ರಹಣಕ್ಕೆ ಶುಭ ಮುಹೂರ್ತ ನಿಗದಿ ಮಾಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಗಾದಿ ಡಿ.ಕೆ. ಶಿವಕುಮಾರ್ ಅವರಿಗೆ ಒಲಿಯುವ ಸಾಧ್ಯತೆಗಳ ನಡುವೆಯೇ, ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ಗೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಅಚ್ಚರಿಯ ರೀತಿಯಲ್ಲಿ ಮುನ್ನೆಲೆಗೆ ಬಂದಿದೆ. ಒಬಿಸಿ ಕೋಟಾದಡಿ ಇವರ ಹೆಸರನ್ನು ಹೈಕಮಾಂಡ್ ಎದುರು ಪ್ರಸ್ತಾಪಿಸಲಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ. 

ಒಂದು ವೇಳೆ ಸತೀಶ್ ಜಾರಕಿಹೊಳಿ ಅವರು ಮಂತ್ರಿಸ್ಥಾನಕ್ಕೆ ಪಟ್ಟು ಹಿಡಿದರೆ, ಹರಿಪ್ರಸಾದ್ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸುವ ಸಂಭವವಿದ್ದು, ಇಂದಿನ ಶಾಸಕಾಂಗ ಸಭೆಯಲ್ಲಿ ಹಿರಿಯ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ‘ಕಾವೇರಿ’ ನಿವಾಸಕ್ಕೆ ನಾಯಕರ ದಂಡೇ ಹರಿದುಬರುತ್ತಿದ್ದು, ಕೆ.ಜೆ. ಜಾರ್ಜ್, ಎ.ಎಸ್. ಪೊನ್ನಣ್ಣ, ಪುಟ್ಟರಂಗಶೆಟ್ಟಿ ಹಾಗೂ ಬಿಲ್ಕೀಸ್ ಬಾನು ಸೇರಿದಂತೆ ಹಲವು ಪ್ರಮುಖರು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಈ ಎಲ್ಲಾ ಬಿರುಸಿನ ರಾಜಕೀಯ ಬೆಳವಣಿಗೆಗಳ ನಡುವೆ, ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಅವರು ದೇವರ ಮೊರೆ ಹೋಗಿದ್ದಾರೆ. ಅವರು ಬೆಂಗಳೂರಿನ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಜ್ಜಯ್ಯನ ಆಶೀರ್ವಾದ ಪಡೆದರು. ಇತ್ತ ಡಿಕೆ ಶಿವಕುಮಾರ್ ಅವರ ಕುಟುಂಬಸ್ಥರು ಕೂಡ ತಮ್ಮ ನಿವಾಸದಲ್ಲಿಯೇ ಅಜ್ಜಯ್ಯನನ್ನು ಆರಾಧಿಸುತ್ತಿದ್ದು, ನೂತನ ಸರ್ಕಾರದ ಸುಗಮ ಆಡಳಿತಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.