ಪಶ್ಚಿಮ ಏಷ್ಯಾ ಹಾಗೂ ಗಲ್ಫ್ ಪ್ರದೇಶದಲ್ಲಿ ಭೌಗೋಳಿಕ ಮತ್ತು ರಾಜಕೀಯ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಕ್ಷುಬ್ಧವಾಗಿರುವ ಹಾರ್ಮುಜ್ ಜಲಸಂಧಿಯಿಂದ (Strait of Hormuz) 13 ಭಾರತೀಯ ವಾಣಿಜ್ಯ ಹಡಗುಗಳನ್ನು ಸುರಕ್ಷಿತವಾಗಿ ಹೊರತರಲು ಭಾರತ ಸರ್ಕಾರವು ಭಾರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತೀಯ ನಾಗರಿಕರು ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಈ ತುರ್ತು ಕಡಲ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಇದೇ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ತುರ್ತು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಯಾವುದೇ ಕಾರಣಕ್ಕೂ ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಜೊತೆಗೆ ಈಗಾಗಲೇ ಇರಾನ್‌ನಲ್ಲಿರುವ ಭಾರತೀಯರು ಕೂಡಲೇ ಅಲ್ಲಿಂದ ಹೊರಬರುವಂತೆ ಮನವಿ ಮಾಡಿದೆ.
ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶಕ ಓಪೇಶ್ ಕುಮಾರ್ ಶರ್ಮಾ ಅವರು ಈ ಕಾರ್ಯಾಚರಣೆಯ ಬಗ್ಗೆ ವಿವರಿಸಿದ್ದು, ಕಡಲ ಮಾರ್ಗದಲ್ಲಿ ಸಿಲುಕಿರುವ ನಮ್ಮ ದೇಶೀಯ ಹಡಗುಗಳನ್ನು ರಕ್ಷಿಸಲು ವಿಶೇಷ ತಂತ್ರಗಾರಿಕೆಯನ್ನು ರೂಪಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಪ್ರಸ್ತುತ ಹಾರ್ಮುಜ್ ಜಲಸಂಧಿಯಲ್ಲಿ 13 ಭಾರತೀಯ ಹಡಗುಗಳಿದ್ದು, ಅದರಲ್ಲಿ 1 ಎಲ್‌ಪಿಜಿ ಟ್ಯಾಂಕರ್, 5 ಕಚ್ಚಾ ತೈಲ ಟ್ಯಾಂಕರ್‌ಗಳು, 1 ರಾಸಾಯನಿಕ ಟ್ಯಾಂಕರ್, 3 ಕಂಟೇನರ್ ಹಡಗುಗಳು, 2 ಬಲ್ಕ್ ಕ್ಯಾರಿಯರ್‌ಗಳು ಹಾಗೂ 1 ಡ್ರೆಡ್ಜರ್ ಸೇರಿವೆ. ಈ ಎಲ್ಲಾ ಹಡಗುಗಳನ್ನು ಆದ್ಯತೆಯ ಮೇರೆಗೆ ಸುರಕ್ಷಿತವಾಗಿ ಹೊರತರುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, 2,70,000 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ಮಾರ್ಷಲ್ ಐಲ್ಯಾಂಡ್-ಫ್ಲ್ಯಾಗ್‌ನ ಬೃಹತ್ ಕಚ್ಚಾ ತೈಲ ಟ್ಯಾಂಕರ್ ‘ನಿಸ್ಸೋಸ್ ಕೆರೋಸ್’ (Nissos Keros) ಮೇ 25-26 ರ ರಾತ್ರಿ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ್ದು, ಜೂನ್ 3, 2026 ರಂದು ವಿಶಾಖಪಟ್ಟಣಂ ಬಂದರನ್ನು ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಶಿಪ್ಪಿಂಗ್ ಡೈರೆಕ್ಟರೇಟ್ ಜನರಲ್ ಸ್ಥಾಪಿಸಿರುವ ತುರ್ತು ನಿಯಂತ್ರಣ ಕೊಠಡಿಯು ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ನಾವಿಕರು ಮತ್ತು ಅವರ ಕುಟುಂಬಗಳಿಂದ 10,800 ಕ್ಕೂ ಹೆಚ್ಚು ಕರೆಗಳು ಹಾಗೂ 24,000 ಕ್ಕೂ ಹೆಚ್ಚು ಇಮೇಲ್‌ಗಳನ್ನು ಸ್ವೀಕರಿಸಲಾಗಿದೆ. ಕಳೆದ 96 ಗಂಟೆಗಳಲ್ಲಿ ರಕ್ಷಿಸಲಾದ 47 ವ್ಯಕ್ತಿಗಳು ಸೇರಿದಂತೆ ಗಲ್ಫ್‌ನ ವಿವಿಧ ಸ್ಥಳಗಳಿಂದ ಒಟ್ಟು 3,422 ಭಾರತೀಯ ನಾವಿಕರನ್ನು ಸರ್ಕಾರವು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿದೆ. ಈ ಬಿಕ್ಕಟ್ಟಿನ ನಡುವೆಯೂ ಯುಎಇ, ಸೌದಿ ಅರೇಬಿಯಾ, ಓಮನ್, ಬಹ್ರೇನ್ ಮತ್ತು ಕುವೈತ್‌ನ ವಾಯುಪ್ರದೇಶಗಳು ತೆರೆದಿದ್ದು, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೊ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಆದರೆ ಇರಾಕ್ ಮತ್ತು ಕತಾರ್ ವಾಯುಮಾರ್ಗಗಳು ಭಾಗಶಃ ಮಾತ್ರ ತೆರೆದಿವೆ ಎಂದು ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್. ಮಹಾಜನ್ ತಿಳಿಸಿದ್ದಾರೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈಗಾಗಲೇ 2,557 ಭಾರತೀಯರನ್ನು ಭೂಗಡಿ ಮಾರ್ಗಗಳ ಮೂಲಕ ಇರಾನ್‌ನಿಂದ ಸುರಕ್ಷಿತವಾಗಿ ಹೊರಬರಲು ನೆರವಾಗಿದೆ. ಭಾರತದ ಪ್ರಾಥಮಿಕ ತೈಲ ಪೂರೈಕೆ ಮಾರ್ಗಗಳಿಗೆ ಎದುರಾಗಿರುವ ಈ ಬೆದರಿಕೆಯ ಕುರಿತು ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ದೇಶದ ಇಂಧನ ಭದ್ರತೆಯು ನಮಗೆ ಅತ್ಯಂತ ಪ್ರಮುಖವಾಗಿದ್ದು, ವಿಶ್ವದ ವಿವಿಧ ಮಾರುಕಟ್ಟೆಗಳಿಂದ ತೈಲ ಪೂರೈಕೆ ಮೂಲಗಳನ್ನು ವೈವಿಧ್ಯಮಯಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
