ನಾವು ನಮ್ಮ ಪೂರ್ವಜರ ಬಗ್ಗೆ ಮಾತನಾಡುವಾಗ, ಅವರು ಏನು ನಿರ್ಮಿಸಿದರು ಎಂಬುದರ ಬಗ್ಗೆ ಮಾತನಾಡುತ್ತೇವೆ. ಇಂದಿಗೂ ಇತಿಹಾಸದ ಮೂಕ ಸಾಕ್ಷಿಯಂತೆ ನಿಂತಿರುವ ದೇವಾಲಯಗಳು, ಇವತ್ತಿಗೂ ಮಣ್ಣಿನಡಿಯಲ್ಲಿ ಉಸಿರಾಡುತ್ತಿರುವ ನಗರಗಳು, ಯಾವುದೇ ಬಾಹ್ಯ ಬಲದ ಪ್ರಭಾವವಿಲ್ಲದೆ ಕೆಲಸ ಮಾಡಿದ ವ್ಯವಸ್ಥೆಗಳು, ಪುಸ್ತಕಗಳಿಲ್ಲದೇ ಶತಮಾನಗಳನ್ನು ದಾಟಿ ಸಾಗಿದ ಆಲೋಚನೆ, ಜ್ಞಾನ – ಇಂಥ ಕಾಲಾತೀತ ಅಂಶಗಳಿಗಾಗಿಯೇ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ. ಕಲ್ಲನ್ನೂ ಶಿಲ್ಪವಾಗಿಸುವಲ್ಲಿ ಬೇಕಾದ ಸಹನೆ, ನಗರಗಳನ್ನು ಯೋಜಿಸಲು ಬೇಕಾದ ಕಲ್ಪನೆ, ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಸಾಗಿಸಲು ಬೇಕಾದ ಶಿಸ್ತು – ಇವೆಲ್ಲವೂ ನಾವು ಇವತ್ತಿಗೂ ಮೆಚ್ಚುವ ಸಂಗತಿಗಳು. ಅಷ್ಟರ ಮಟ್ಟಿಗೆ ಅವರ ಸಾಧನೆಗಳು, ಚರಿತ್ರೆ ದೃಢವಾಗಿವೆ, ಗಟ್ಟಿಯಾಗಿವೆ, ಸತ್ವಯುತವಾಗಿವೆ. ಅವುಗಳನ್ನು ಅನುಭವಿಸಬಹುದು, ಸ್ಪರ್ಶಿಸಬಹುದು.
ಆದರೆ ಪ್ರಶ್ನೆ ಅದಲ್ಲ, ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಅದೇ ರೀತಿಯಲ್ಲಿ ನೆನಪಿಸಿಕೊಳ್ಳುತ್ತದಾ ಎಂಬುದು. ಇಲ್ಲ, ಖಂಡಿತಾ ಇಲ್ಲ. ನಾವೇನೋ ಕಡಿಮೆ ಸಾಧಿಸಿದ್ದೇವೆ ಅಂತಲ್ಲ. ಆದರೆ ನಾವು ಬಿಟ್ಟುಹೋಗುವ ಕುರುಹುಗಳ ಸ್ವರೂಪವೇ ಬೇರೆಯಾದ್ದರಿಂದ. ನಮ್ಮ ಪೂರ್ವಜರನ್ನು ಅವರ ಅದ್ಭುತ ಸೃಷ್ಟಿಗಾಗಿ ನೆನಪಿಸಿಕೊಂಡರೆ ನಮ್ಮನ್ನು ಜಗತ್ತನ್ನೇ ಕುಲಗೆಡಿಸದ್ದಕ್ಕಾಗಿ ನೆನಪಿಸಿಕೊಳ್ಳಬಹುದು.
ನಮ್ಮ ಹಿರೀಕರು ದೀರ್ಘಕಾಲದ ಬಳಕೆಗೆ ಅನುಕೂಲವಾಗುವ ವಸ್ತುಗಳನ್ನು ಸೃಷ್ಟಿಸಿದರು. ಅವರ ರಚನೆಗಳೆಲ್ಲಾ ಲಾಂಗ್ ಲಾಸ್ಟಿಂಗ್ ಗಳಾಗಿದ್ದವು. ನಾವು ವೇಗದ ಹಾದಿ ಹಿಡಿದಿದ್ದೇವೆ. ಇನ್ಸ್ಟಂಟ್ ಗ್ರಾಟಿಫಿಕೇಷನ್ ನ ಹಿಂದೆ ಬಿದ್ದಿದ್ದೇವೆ. ಹೀಗಾಗಿ ನಾವು ಬಿಟ್ಟುಹೋಗುವುದು ಸುಟ್ಟಅವಶೇಷಗಳು ಮಾತ್ರ. ಅಥವಾ ಕೆಟ್ಟ ಪರಿಣಾಮಗಳನ್ನು ಮಾತ್ರ. ಹಿಂದಿನವರು ತಮ್ಮ ಸೃಜನೆಗಳಲ್ಲಿ ವೈಫಲ್ಯಗಳನ್ನು ಕಂಡಿರುವುದೇ ಕಡಿಮೆಯಾಗಿತ್ತು. ಕಂಡರೂ ಅವರ ಅವನತಿ ಶತಮಾನಗಳ ನಂತರ ಗೋಚರಿಸುತ್ತಿತ್ತು. ಆದರೆ ನಮ್ಮವು ಹಾಗಲ್ಲ, ದಶಕಗಳಲ್ಲೇ ಕುಸಿದು ಕುಳಿತುಕೊಳ್ಳುತ್ತದೆ. ದಶಕಗಳೇನು, ಕೆಲವೇ ವರ್ಷಗಳಲ್ಲೇ ಪತನದ ಹಾದಿ ಹಿಡಿಯುತ್ತವೆ.
ಭವಿಷ್ಯದ ಜಮಾನಾ ನಮ್ಮತ್ತ ಹಿಂತಿರುಗಿ ನೋಡಿದಾಗ, ನಾವು ಎಷ್ಟು ವೇಗವಾಗಿ, ಬೇಗನೆ ಸರಸರನೇ ಜಗತ್ತನ್ನು ಕಟ್ಟಿದೆವು ಎಂದು ಆಶ್ಚರ್ಯಪಡುವುದಿಲ್ಲ. ಅವರು ನಮ್ಮ ಸ್ಮಾರಕಗಳನ್ನು ಅಧ್ಯಯನ ಮಾಡುವುದಿಲ್ಲ. ಏಕೆಂದರೆ ಅಂಥದ್ದೇನು ಕಟ್ಟಿಯೇ ಇಲ್ಲವಲ್ಲ. ನಮ್ಮ ದತ್ತಾಂಶವನ್ನು (ಡೇಟಾ) ಅಧ್ಯಯನ ಮಾಡುತ್ತಾರೆ. ನಾವು ಎಷ್ಟು ಸಂಪರ್ಕ ಸಾಧನ ಬಳಸುತ್ತಿದೆವು, ಎಷ್ಟು ಸೋಷಿಯಲ್ ಮೀಡಿಯಾ ಪ್ಲಾಟಫಾರ್ಮ್ ಗಳಿದ್ದವು ಎಂಬುದನ್ನು ಅವರು ಲೆಕ್ಕಹಾಕುವುದಿಲ್ಲ. ಆ ಸಂಪರ್ಕದ ನಡುವೆಯೂ ಜನರು ಎಷ್ಟು ದೂರ ದೂರವಾಗಿದ್ದರು ಎಂಬುದನ್ನು ಅರ್ಥೈಸಿಕೊಳ್ಳುತ್ತಾರೆ. ಅರ್ಥಾತ್ ಭವಿಷ್ಯ ನಮ್ಮ ತಂತ್ರಜ್ಞಾನಗಳಿಂದ ಪ್ರಭಾವಿತವಾಗುವುದಿಲ್ಲ. ಅದಕ್ಕೆ ಮುಂದೆ ಎಂಟಾಣೆ ಕಿಮ್ಮತ್ತೂ ಇಲ್ಲ. ಆಗ ಬೇರೆಯದೇ ಚಾಲ್ತಿಗೆ ಬಂದಿರುತ್ತದೆ.
ಪ್ರತಿ ವರ್ಷ ಜಗತ್ತು ಸುಮಾರು ೧೦ ಮಿಲಿಯನ್ ಹೆಕ್ಟೇರ್ ಅರಣ್ಯವನ್ನು ಕಳೆದುಕೊಳ್ಳುತ್ತಿದೆ. ಇದು ಸುಮಾರು ೨೫–೩೦ ಲಕ್ಷ ಫುಟ್‌ಬಾಲ್ ಮೈದಾನಗಳಷ್ಟು ವಿಸ್ತೀರ್ಣಕ್ಕೆ ಸಮನಾಗುವ ಭೂಮಿ. ಅರಣ್ಯಗಳು ನಿಧಾನವಾಗಿ ಪೃಕೃತಿಯ ಸಮತೋಲನಕ್ಕೆ ಬೇಕಾಗಿ ಕಡಿಮೆಯಾಗುತ್ತಿಲ್ಲ. ಅವುಗಳನ್ನು ಯೋಜಿತವಾಗಿ ನಾಶಮಾಡಲಾಗುತ್ತಿದೆ. ಕೆಲವೊಮ್ಮೆ ಆಹಾರ ಬೆಳೆ ಭೂಮಿಗಾಗಿ, ಕೆಲವೊಮ್ಮೆ ನಗರೀಕರಣಕ್ಕಾಗಿ, ಕೆಲವೊಮ್ಮೆ ಗಣಿಗಾರಿಕೆಗಾಗಿ. ನಾವು ಇದನ್ನು “ಅಭಿವೃದ್ಧಿ” ಎಂದು ಕರೆದು ಏನೋ ದೊಡ್ಡದೆಂದು ಸಂಭ್ರಮಿಸುತ್ತೇವೆ.
ಕಾಡೆಂದರೆ ಕೇವಲ ಒಂದಿಷ್ಟು ಮರಗಳ ಗುಂಪಲ್ಲ. ಅದು ಋತುಮಾನಚಕ್ರ ನಿಯಂತ್ರಕ, ತಾಪಮಾನ ನಿಯಂತ್ರಕ, ಜೀವ ವೈವಿಧ್ಯ ಪೋಷಕ ಎಲ್ಲವೂ. ಹೀಗಾಗಿ ಒಂದು ಮರ ಕಡಿದಾಗ, ಒಂದು ಜೀವ ಮಾತ್ರ ಹೋಗುವುದಿಲ್ಲ. ಒಂದಿಡೀ ವ್ಯವಸ್ಥೆಯ ಸಮತೋಲನವೇ ತಪ್ಪುತ್ತದೆ. ನಾವು ಮಾಡುತ್ತಿರುವ ಮಾಲಿನ್ಯವಂತೂ ಇನ್ನೂ ಭಯಂಕರವಾಗಿದೆ. ಪ್ರತಿ ವರ್ಷ ಜಗತ್ತಿನಲ್ಲಿ ೩೫–೪೦ ಬಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ವಾತಾವರಣಕ್ಕೆ ಸೇರುತ್ತಿದೆ. ಇದು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಪರಿಣಾಮಗಳು ? ಸ್ಪಷ್ಟವಾಗಿ ಕಾಣಿಸುತ್ತದೆ. ಉಷ್ಣಾಂಶ ಏರಿಕೆ, ಅಸಾಮಾನ್ಯ ಮಳೆ, ಬರ, ಪ್ರವಾಹ – ಇವುಗಳು ಪ್ರತ್ಯೇಕ ಪೃಕೃತಿ ವಿಕೋಪಗಳಲ್ಲ. ಒಂದು ವ್ಯವಸ್ಥೆ – ಸರಪಣಿ ಹಾಳಾಗುತ್ತಿರುವುದರ ಮುನ್ಸೂಚನೆ.
ನಮ್ಮ ವಾತಾವರಣ ಒಂದು ಮಟ್ಟಿಗಿನ ಮನುಷ್ಯನ ತಪ್ಪು, ಅಟ್ಟಹಾಸಗಳನ್ನು ಸಹಿಸಿಕೊಳ್ಳುತ್ತದೆ. ಅದು ಮೀರಿ ಹೋಗಿದೆ. ಈ ವಿಚಾರ ಗೊತ್ತಿಲ್ಲವಾ, ಗೊತ್ತಿದೆ. ಕಾರ್ಯಪೃವೃತ್ತರಾಗುತ್ತಿಲ್ಲ ಅಷ್ಟೇ. ಗ್ಲೋಬಲ್ ವಾರ್ಮಿಂಗ್ ವಿಷಯವನ್ನೇ ತೆಗೆದುಕೊಳ್ಳಿ. ಎಲ್ಲಾ ತಿಳಿದಿದ್ದೂ ತಡ ಮಾಡುತ್ತಿದ್ದೇವೆ. ಭೂಮಿಯ ಸರಾಸರಿ ತಾಪಮಾನ ಈಗಾಗಲೇ ೧.೨ ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಇದು ಸಣ್ಣ ಸಂಖ್ಯೆ ಎನಿಸಬಹುದು. ಆದರೆ ಭೂಮಿಯ ಇತಿಹಾಸದಲ್ಲಿ ಇಷ್ಟು ವೇಗದ ಬದಲಾವಣೆ ಆಗುತ್ತಿರುವುದು ಇದೆ ಮೊದಲು. ಹಿಮನದಿಗಳು ಕರಗುತ್ತಿವೆ, ಸಮುದ್ರ ಮಟ್ಟ ಏರುತ್ತಿದೆ, ಮತ್ತು ಕೆಲವು ದ್ವೀಪ ರಾಷ್ಟ್ರಗಳು ಭೂಪಟದಿಂದಲೇ ಮಾಯವಾಗುವ ಭೀತಿಯಲ್ಲಿವೆ.
ನಾವು ಉಸಿರಾಡುವ ಗಾಳಿಯ ಸ್ಥಿತಿಯೂ ಭಿನ್ನವಲ್ಲ. ಅನೇಕ ಭಾರತೀಯ ನಗರಗಳಲ್ಲಿ ಸರಾಸರಿ AQI ೧೫೦–೨೦೦ ತಲುಪುತ್ತದೆ. ಇದು “ಅನಾರೋಗ್ಯಕರ” ಹಂತ. ಮಕ್ಕಳ ಶ್ವಾಸಕೋಶಗಳು, ವೃದ್ಧರ ಹೃದಯಗಳು, ಗರ್ಭಿಣಿಯರ ಆರೋಗ್ಯ – ಇವೆಲ್ಲದರ ಮೇಲೆ ಈ AQI ಪರಿಣಾಮ ಬೀರುತ್ತದೆ. ಆದರೂ ನಾವು ಇದನ್ನು ತಾತ್ಕಾಲಿಕ ಸಮಸ್ಯೆಯಂತೆ ನೋಡುತ್ತೇವೆ. ನಾವು ನದಿಗಳನ್ನು ಸರಾಗವಾಗಿ ಹರಿಯುವಂತೆ ಉಳಿಸಿಕೊಂಡಿಲ್ಲ. ಅವುಗಳನ್ನು ನಮ್ಮ ಕಸ ಸಾಗಿಸುವ ಕಾಲುವೆಗಳಂತೆ ಬಳಸುತ್ತಿದ್ದೇವೆ. ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯ, ಶುದ್ಧೀಕರಣಗೊಳ್ಳದ ಕೊಳಚೆ ನೀರು – ಇವೆಲ್ಲವೂ ನದಿ ನೀರಿನ ಜೊತೆ ಸಾಗುತ್ತಿದೆ. ಹೊಳೆಯೇನೋ ಇನ್ನೂ ಹರಿಯುತ್ತಿದೆ, ಆದರೆ ಜೀವ ಉಳಿಸುವ ಅಮೃತವಾಗಿ ಅಲ್ಲ. ಇವ್ಯಾವುವೂ ಅಜ್ಞಾನದಿಂದ ನಡೆಯುತ್ತಿರುವುದಲ್ಲ. ನಮ್ಮ ಬಳಿ ಮಾಹಿತಿ ಇದೆ. ಎಚ್ಚರಿಕೆಗಳೂ ಇವೆ. ಆದರೂ ದುರಾಸೆ ಅದಕ್ಕಿಂತ ಹೆಚ್ಚಿದೆ. ನಮ್ಮ ನಿಜವಾದ ಸಮಸ್ಯೆ, ಸಮಸ್ಯೆ ತಿಳಿಯದಿರುವುದಲ್ಲ. ನಮ್ಮ ಅನುಕೂಲ, ಸೌಕರ್ಯ ಬಿಟ್ಟು ನಿಲ್ಲಲು ಸಿದ್ಧರಾಗದಿರುವುದು.
ಹೇಗೆ ನಾವು ನಮ್ಮ ಪೂರ್ವಜರನ್ನು ಅವರು ಕಟ್ಟಿದದ್ದಕ್ಕಾಗಿ ನೆನಪಿಸಿಕೊಳ್ಳುತ್ತೇವೆಯೋ ಹಾಗೆ ನಮ್ಮನ್ನು ಮುಂದಿನ ತಲೆಮಾರು ಉಳಿಸಿಕೊಂಡಿದ್ದಕ್ಕಾಗಿ ನೆನಪಿಸಿಕೊಳ್ಳಲಿ. ಯಾಕೆಂದರೆ ಪ್ರತಿ ಪೀಳಿಗೆಯನ್ನೂ ಅದು ಏನು ಅನುಭವಿಸಿತು ಎಂಬುದರಿಂದಲ್ಲ, ಹೊಸತರ ಸಂತಿಗೆ ಏನನ್ನು ಅದೇ ಸ್ಥಿತಿಯಲ್ಲಿ ಮುಂದಕ್ಕೆ ಹಸ್ತಾಂತರಿಸಿತು ಎಂಬುದರಿಂದಲೇ ತೀರ್ಮಾನಿಸಲಾಗುತ್ತದೆ. ಹೀಗಾಗಿ ಕಟ್ಟಲು ಸಾಧ್ಯವಿರುವ ಪ್ರತಿಯೊಂದನ್ನೂ ಕಟ್ಟಲೇಬೇಕಂತಿಲ್ಲ. ಆದರೆ ಉಳಿಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಕನಿಷ್ಠ ಉಳಿಸಿಕೊಳ್ಳಬಹುದಲ್ಲ.
ಕೊನೆಯ ತುತ್ತು: ನಮ್ಮ ಪೂರ್ವಜರ ಸೃಷ್ಟಿಗಳಿಗೆ ಮಿತಿ ಇತ್ತು. ಒಂದು ನಿರ್ಧಿಷ್ಟ ಬೇಲಿಯಿತ್ತು. ಕೆಲಸ ನಿಧಾನವಾಗಿದ್ದರೂ ಅಪರೂಪವಾದದ್ದಾಗಿರುತ್ತಿತ್ತು. ಜ್ಞಾನದ ಹರಿವು ಎಚ್ಚರಿಕೆಯಿಂದ ಕೈದಾಟುತ್ತಿತ್ತು. ಅಯೋಗ್ಯರ ಕೈಗೆ ಸಿಕ್ಕು ಮಂಗನ ಕೈಗೆ ಸಿಕ್ಕ ಮಾಣಿಕ್ಯವಾಗುತ್ತಿರಲಿಲ್ಲ. ಈಗ ? ಎಲ್ಲದರಲ್ಲಿಯೂ ಧಾವಂತ, ಎಲ್ಲರಲ್ಲಿಯೂ ಧಾವಂತ. ನಿಂತು ಯೋಚಿಸುವ ಸಂಯಮವೇ ಸತ್ತುಹೋಗಿದೆ. ಅಂತಿಮವಾಗಿ, ಇತಿಹಾಸ ಉಳಿಸಿಕೊಳ್ಳುವುದು ಪ್ರಾಮಾಣಿಕತೆಯನ್ನೇ. ಅದು ನಾವು ಏನನ್ನು ಕಟ್ಟಿದ್ದೆವು ಎಂಬುದನ್ನು ಕೇಳುವುದಿಲ್ಲ, ಬದಲಾಗಿ ನಾವು ಏನು ಉಳಿಸಿದ್ದೇವೆ ಎಂದು ನೋಡುತ್ತದೆ. ಉಳಿಸಿಕೊಳ್ಳಬಹುದಾದ ಕೊನೆಯ ಹಂತದಲ್ಲಿದ್ದೇವೆ. ಪ್ಲೀಸ್ ಉಳಿಸಿಕೊಳ್ಳೋಣ.
