ಮಂಗಳೂರು: ಸಮುದ್ರದ ಅಲೆಗಳ ಆರ್ಭಟವನ್ನು ಕಂಡು ಭಯಪಡುವವರೇ ಹೆಚ್ಚು. ಆದರೆ ಇಲ್ಲೊಬ್ಬ ಛಲದಂಕ ಮಲ್ಲ, ಅದೇ ಅಲೆಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ 10 ವರ್ಷಗಳ ಕಠಿಣ ಪರಿಶ್ರಮ ಮತ್ತು ಲಕ್ಷಾಂತರ ರೂಪಾಯಿಗಳ ಖರ್ಚಿನ ಬಳಿಕ, ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರ್ ವಿಶ್ವನಾಥ್ ಅವರು ಮಂಗಳೂರಿನ ಸುರತ್ಕಲ್ ಕಡಲತಡಿಯಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ವಿಶ್ವನಾಥ್, ಕಳೆದ ಒಂದು ದಶಕದಿಂದ ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಕನಸು ಕಂಡಿದ್ದರು. ಇದಕ್ಕಾಗಿ ಅವರು ತಮ್ಮ ಸ್ವಂತ ಪರಿಕಲ್ಪನೆಯಲ್ಲಿ ವಿಶೇಷ ಯಂತ್ರವೊಂದನ್ನು ವಿನ್ಯಾಸಗೊಳಿಸಿದ್ದರು. ಸುರತ್ಕಲ್ ಬಳಿಯ ಎನ್ಐಟಿಕೆ (NITK) ಬೀಚ್‌ನಲ್ಲಿ ನಿರಂತರ ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದ ಇವರು, ಇದಕ್ಕಾಗಿ ಬರೋಬ್ಬರಿ 46 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಅನೇಕ ಬಾರಿ ವೈಫಲ್ಯಗಳನ್ನು ಕಂಡರೂ ಎದೆಗುಂದದೆ ತಮ್ಮ ಪ್ರಯೋಗವನ್ನು ಮುಂದುವರಿಸಿದ್ದರು.
ಅಲೆಗಳ ರಭಸಕ್ಕೆ ವಿದ್ಯುತ್ ಮಿಂಚು!
ವಿಶ್ವನಾಥ್ ರೂಪಿಸಿದ ಈ ಪ್ರೊಟೊಟೈಪ್ (ಮಾದರಿ) ಯಂತ್ರವನ್ನು ಸಮುದ್ರದ ಅಲೆಗಳ ನಡುವೆ ಇರಿಸಲಾಗುತ್ತದೆ. ಅಲೆಗಳು ರಭಸವಾಗಿ ಬಂದು ಅಪ್ಪಳಿಸಿದಾಗ, ಯಂತ್ರದ ಕವಾಟಗಳು ಅತ್ತಿತ್ತ ಚಲಿಸುತ್ತವೆ. ಈ ಚಲನೆಯಿಂದ ಯಾಂತ್ರಿಕ ಶಕ್ತಿಯು ವಿದ್ಯುತ್ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಸದ್ಯ ಈ ಮಾದರಿ ಯಂತ್ರವು 500 ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ರಾತ್ರಿ ವೇಳೆ ಕಡಲ ತಡಿಯಲ್ಲಿ ಈ ಯಂತ್ರದ ಮೂಲಕ ಉತ್ಪಾದಿಸಲಾದ ವಿದ್ಯುತ್‌ನಿಂದ ದೀಪವೊಂದು ಬೆಳಗಿದಾಗ, ವಿಶ್ವನಾಥ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ದಶಕದ ಶ್ರಮ ಸಾರ್ಥಕವಾಯಿತಲ್ಲ ಎಂದು ಅವರು ಹರ್ಷದಿಂದ ಕಣ್ಣೀರು ಸುರಿಸಿದರು. “ಇದೇ ತಂತ್ರಜ್ಞಾನವನ್ನು ಬಳಸಿ ದೊಡ್ಡ ಗಾತ್ರದ ಯಂತ್ರಗಳನ್ನು ತಯಾರಿಸಿದರೆ, ಭವಿಷ್ಯದಲ್ಲಿ ವಾಣಿಜ್ಯ ಬಳಕೆಗೆ ಬೇಕಾದಷ್ಟು ವಿದ್ಯುತ್ ಅನ್ನು ಪರಿಸರ ಸ್ನೇಹಿಯಾಗಿ ಉತ್ಪಾದಿಸಬಹುದು,” ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
