ಬೆಂಗಳೂರು: ರಾಜ್ಯ ರಾಜಧಾನಿಯ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಬೆಂಗಳೂರು ಜಿಲ್ಲಾ ಪೊಲೀಸ್ (ಗ್ರಾಮಾಂತರ) ವ್ಯಾಪ್ತಿಯಲ್ಲಿದ್ದ ಮದನಾಯಕನಹಳ್ಳಿ ಮತ್ತು ರಾಜಾನುಕುಂಟೆ ಪೊಲೀಸ್ ಠಾಣೆಗಳನ್ನು ಇಂದಿನಿಂದ (ನ.27) ಜಾರಿಗೆ ಬರುವಂತೆ ‘ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯ’ದ (Bengaluru City Police) ವ್ಯಾಪ್ತಿಗೆ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎನ್.ವನಜಾ ಅವರು ಹೊರಡಿಸಿರುವ ಆದೇಶದ ಪ್ರಕಾರ, ನೆಲಮಂಗಲ ಉಪವಿಭಾಗದ ಅಡಿಯಲ್ಲಿ ಬರುತ್ತಿದ್ದ ಮದನಾಯಕನಹಳ್ಳಿ ಠಾಣೆ ಹಾಗೂ ದೊಡ್ಡಬಳ್ಳಾಪುರ ಉಪವಿಭಾಗದ ವ್ಯಾಪ್ತಿಯಲ್ಲಿದ್ದ ರಾಜಾನುಕುಂಟೆ ಠಾಣೆಗಳನ್ನು ಬೆಂಗಳೂರು ಜಿಲ್ಲಾ ಘಟಕದಿಂದ ಪ್ರತ್ಯೇಕಿಸಲಾಗಿದೆ. ಈ ಎರಡೂ ಠಾಣೆಗಳು ಇನ್ನು ಮುಂದೆ ಬೆಂಗಳೂರು ನಗರದ ‘ವಾಯುವ್ಯ ವಿಭಾಗ’ದ (North West Division) ಪೀಣ್ಯ ಉಪವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.
ಈ ಪ್ರದೇಶಗಳು ಬೆಂಗಳೂರು ನಗರಕ್ಕೆ ಹೊಂದಿಕೊಂಡಂತಿದ್ದು, ತ್ವರಿತ ಗತಿಯಲ್ಲಿ ನಗರೀಕರಣಗೊಳ್ಳುತ್ತಿವೆ. ಜನಸಂಖ್ಯೆಯ ಏರಿಕೆ, ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ನಗರ ಪೊಲೀಸ್ ವ್ಯವಸ್ಥೆಯ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಹೊಸದಾಗಿ ರಚಿಸಲಾದ ಡಿಸಿಪಿ ಹುದ್ದೆಗಳು ಮತ್ತು ಕಾನೂನು ಸುವ್ಯವಸ್ಥೆ ವಿಭಾಗಗಳ ಪುನರ್ ವಿಂಗಡಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
