ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಫಲಾನುಭವಿಗಳ ಭೌತಿಕ ಪರಿಶೀಲನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮನೆ ಮನೆಗೆ ಬರುವ ಎಸ್ಕಾಂ ಸಿಬ್ಬಂದಿ ನೀಡುವ ಪರಿಶೀಲನಾ ಅರ್ಜಿಯನ್ನು (Physical Verification Form) ದೋಷರಹಿತವಾಗಿ ಭರ್ತಿ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
1. ಪ್ರಾಥಮಿಕ ಮಾಹಿತಿ ಮತ್ತು ವಿದ್ಯುತ್ ಸಂಪರ್ಕದ ವಿವರ
* ಎಸ್ಕಾಂ (ESCOM) ಹೆಸರು: ನಿಮ್ಮ ವಿದ್ಯುತ್ ಸಂಪರ್ಕವು ಯಾವ ವ್ಯಾಪ್ತಿಗೆ ಬರುತ್ತದೆಯೋ ಆ ಎಸ್ಕಾಂ ಹೆಸರನ್ನು (ಉದಾಹರಣೆಗೆ: BESCOM, MESCOM, HESCOM, CESC, ಅಥವಾ GESCOM) ಸ್ಪಷ್ಟವಾಗಿ ಬರೆಯಿರಿ.
* ವಿದ್ಯುತ್ ಖಾತೆ ಸಂಖ್ಯೆ (Account ID): ನಿಮ್ಮ ಮಾಸಿಕ ವಿದ್ಯುತ್ ಬಿಲ್‌ನಲ್ಲಿರುವ ‘ಖಾತೆ ಸಂಖ್ಯೆ’ ಅಥವಾ ‘ಕನೆಕ್ಷನ್ ಐಡಿ’ಯನ್ನು ನಿಖರವಾಗಿ ನಮೂದಿಸಿ.
2. ಫಲಾನುಭವಿಯ ವೈಯಕ್ತಿಕ ವಿವರಗಳು
*ಆಧಾರ್ ಸಂಖ್ಯೆ: ಫಲಾನುಭವಿಯ 12 ಅಂಕಿಯ ಆಧಾರ್ ಸಂಖ್ಯೆಯನ್ನು ತಪ್ಪಿಲ್ಲದೆ ಬರೆಯಿರಿ.
*ಹೆಸರು: ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವಂತೆಯೇ ನಿಮ್ಮ ಹೆಸರನ್ನು ನಮೂದಿಸಿ.
*ಮೊಬೈಲ್ ಸಂಖ್ಯೆ: ಗೃಹಜ್ಯೋತಿ ಯೋಜನೆಗೆ ಆರಂಭದಲ್ಲಿ ನೋಂದಾಯಿಸಿಕೊಳ್ಳುವಾಗ ನೀಡಿದ್ದ ಮೊಬೈಲ್ ಸಂಖ್ಯೆಯನ್ನೇ ಇಲ್ಲಿ ದಾಖಲಿಸುವುದು ಕಡ್ಡಾಯ.
*ಭಾವಚಿತ್ರ: ಅರ್ಜಿಯಲ್ಲಿ ನಿಗದಿಪಡಿಸಿದ ಜಾಗದಲ್ಲಿ ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ (3.5 × 4.5 ಸೆಂ.ಮೀ.) ಫೋಟೋವನ್ನು ಅಂಟಿಸಿ.
3. ವಸತಿ ಮತ್ತು ಪಡಿತರ ಚೀಟಿ ವಿವರ
*ಮನೆ ಮಾಲೀಕ / ಬಾಡಿಗೆದಾರ: ನೀವು ವಾಸವಿರುವ ಮನೆಯ ಮಾಲೀಕರಾಗಿದ್ದರೆ ‘Owner’ (ಮಾಲೀಕ) ಎಂದು, ಬಾಡಿಗೆದಾರರಾಗಿದ್ದರೆ ‘Tenant’ (ಬಾಡಿಗೆದಾರ) ಎಂದು ಸರಿಯಾದ ಆಯ್ಕೆಗೆ ಟಿಕ್ ಮಾಡಿ. (ಯಾವುದಾದರೂ ಒಂದಕ್ಕೆ ಮಾತ್ರ ಟಿಕ್ ಮಾಡಬೇಕು).
*ರೇಷನ್ ಕಾರ್ಡ್ ವಿವರ: ನಿಮ್ಮ ಬಳಿ ಇರುವ ಪಡಿತರ ಚೀಟಿಯ ಪ್ರಕಾರ ಎಪಿಎಲ್ (APL) ಅಥವಾ ಬಿಪಿಎಲ್ (BPL) ಆಯ್ಕೆಯನ್ನು ಟಿಕ್ ಮಾಡಿ. ರೇಷನ್ ಕಾರ್ಡ್ ಇಲ್ಲದಿದ್ದರೆ ‘ಇಲ್ಲ’ ಎಂಬುದಕ್ಕೆ ಟಿಕ್ ಮಾಡಿ. ಒಂದು ವೇಳೆ ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಕಡ್ಡಾಯವಾಗಿ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
4. ಇತರ ಪ್ರಮುಖ ದಾಖಲೆಗಳ ವಿವರ
* ಮತದಾರರ ವಿವರ (EPIC): ನೀವು ಕರ್ನಾಟಕದ ನೋಂದಾಯಿತ ಮತದಾರರಾಗಿದ್ದರೆ ‘ಹೌದು (YES)’ ಎಂದು ಟಿಕ್ ಮಾಡಿ ಹಾಗೂ ನಿಮ್ಮ ವೋಟರ್ ಐಡಿ (EPIC) ಸಂಖ್ಯೆಯನ್ನು ಬರೆಯಿರಿ. ಇಲ್ಲದಿದ್ದರೆ ‘ಇಲ್ಲ (NO)’ ಎಂದು ಟಿಕ್ ಮಾಡಿ.
* ವರ್ಗ / ಪ್ರವರ್ಗ: ನೀವು ಸೇರಿರುವ ವರ್ಗವನ್ನು (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ / ಅಲ್ಪಸಂಖ್ಯಾತ ಅಥವಾ ಇತರೆ) ಸರಿಯಾಗಿ ಆಯ್ಕೆ ಮಾಡಿ.
* ಆದಾಯ ತೆರಿಗೆ (Income Tax): ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ‘ಹೌದು’ ಎಂದು ಟಿಕ್ ಮಾಡಿ, ನಿಮ್ಮ ಪ್ಯಾನ್ (PAN) ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ. ಇಲ್ಲದಿದ್ದರೆ ‘ಇಲ್ಲ’ ಎಂದು ಟಿಕ್ ಮಾಡಿ.
* ವೃತ್ತಿ ವಿವರ: ಅರ್ಜಿಯಲ್ಲಿ ನೀಡಿರುವ ಪಟ್ಟಿಯಲ್ಲಿ ನಿಮ್ಮ ವೃತ್ತಿಯನ್ನು (ಉದಾಹರಣೆಗೆ: ಸರ್ಕಾರಿ/ಖಾಸಗಿ/ರೈತ/ಕೂಲಿಕಾರ್ಮಿಕ ಅಥವಾ ವ್ಯಾಪಾರ) ಟಿಕ್ ಮಾಡಿ. ಪಟ್ಟಿಯಲ್ಲಿ ನಿಮ್ಮ ವೃತ್ತಿ ಇಲ್ಲದಿದ್ದರೆ ‘ಇತರೆ’ ಆಯ್ಕೆಯನ್ನು ಬಳಸಿ.
5. ಅಂತಿಮ ಘೋಷಣೆ ಮತ್ತು ಸಹಿ
ಅರ್ಜಿಯ ಕೊನೆಯಲ್ಲಿ ನೀಡಲಾಗಿರುವ ನಿಯಮ ಮತ್ತು ಷರತ್ತುಗಳ ಘೋಷಣೆಯನ್ನು ಓದಿ ಒಪ್ಪಿಕೊಳ್ಳಿ.
ಆ ನಂತರ, ನಿಗದಿತ ಸ್ಥಳದಲ್ಲಿ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಸಹಿ ಮಾಡಬೇಕು. ಅಂತಿಮವಾಗಿ ನಿಮ್ಮ ಮಾಹಿತಿಯನ್ನು ಪರಿಶೀಲಿಸಿದ ಸರ್ವೇಯರ್ (ಎಸ್ಕಾಂ ಸಿಬ್ಬಂದಿ) ಕೂಡ ತಮ್ಮ ಸಹಿಯನ್ನು ಮಾಡಲಿದ್ದಾರೆ.
