ಬೆಂಗಳೂರು: “ಬೆಂಗಳೂರಿನಲ್ಲಿ ಎಂದಿಗೂ ಗುಂಡಿ ಬೀಳದಂತಹ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಿಲ್ಲವೇ? ರಸ್ತೆ ನಿರ್ಮಾಣ ಮಾಡುವುದೇನು ರಾಕೆಟ್ ಸೈನ್ಸಾ?” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ನೂತನವಾಗಿ ರಚನೆಯಾದ ಐದು ನಗರ ಪಾಲಿಕೆಗಳ ಜೊತೆಗಿನ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಕಳಪೆ ಕಾಮಗಾರಿಗಳ ಬಗ್ಗೆ ಅಸಮಾಧಾನ
ರಸ್ತೆಗಳಲ್ಲಿ ಪದೇ ಪದೇ ಗುಂಡಿಗಳು ಏಕೆ ಬೀಳುತ್ತಿವೆ ಎಂದು ಪ್ರಶ್ನಿಸಿದ ಸಚಿವರು, ನಗರವು ಕಳಪೆ ರಸ್ತೆಗಳನ್ನು ನಿರ್ಮಿಸುವ ಹಾಗೂ ನಂತರ ಅವುಗಳನ್ನು ದುರಸ್ತಿ ಮಾಡಲು ಸಾರ್ವಜನಿಕರ ಹಣವನ್ನು ಪೋಲು ಮಾಡುವ ವಿಷವರ್ತುಲದಲ್ಲಿ ಸಿಲುಕಿಕೊಂಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ರಸ್ತೆ ನಿರ್ಮಾಣವೇನು ರಾಕೆಟ್ ಸೈನ್ಸಾ? ನಾವು ಮೂಲಭೂತ ಅಂಶಗಳನ್ನು ಸರಿಯಾಗಿ ಮಾಡಬೇಕು. ನೀವು ಏನೇ ಮಾಡಿದರೂ ಅದನ್ನು ಸರಿಯಾಗಿ ಮಾಡಿ. ರೋಗ ಬರುವ ಮುನ್ನ ತಡೆಯುವುದೇ ಉತ್ತಮ ಮದ್ದು (Prevention is the best cure). ಇದು ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ” ಎಂದು ಎಂಜಿನಿಯರ್‌ಗಳಿಗೆ ಕೃಷ್ಣ ಬೈರೇಗೌಡ ಕಿವಿಮಾತು ಹೇಳಿದರು.
“ರಸ್ತೆ ಗುಂಡಿಗಳು ಕೇವಲ ಒಂದು ಲಕ್ಷಣವಷ್ಟೇ. ನಾವು ಮಾಡುವ ಕಾಮಗಾರಿಯ ಗುಣಮಟ್ಟವೇ ಅಸಲಿ ಸಮಸ್ಯೆ. ಮೂಲಭೂತ ಕಾಮಗಾರಿಗಳನ್ನು ಸರಿಯಾಗಿ ಮಾಡಿದರೆ, ಭವಿಷ್ಯದ ಅನೇಕ ಸಮಸ್ಯೆಗಳನ್ನು ತಡೆಯಬಹುದು. ಇಲ್ಲದಿದ್ದರೆ, ನಾವು ಶಾಶ್ವತವಾಗಿ ಈ ಗುಂಡಿ ಮುಚ್ಚುವ ಕೆಲಸದಲ್ಲೇ ಇರಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದರು. ಬೆಂಗಳೂರಿಗಿಂತ ಹೆಚ್ಚಿನ ಮಳೆ ಬೀಳುವ ಹಲವು ರಾಜ್ಯಗಳಲ್ಲಿ ರಸ್ತೆಗಳು ಗುಂಡಿ ಮುಕ್ತವಾಗಿರುತ್ತವೆ ಎಂಬುದನ್ನು ಸಚಿವರು ಇದೇ ವೇಳೆ ಬೊಟ್ಟು ಮಾಡಿದರು.
ದೈನಂದಿನ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸೂಚನೆ
ಬೆಂಗಳೂರಿನ 1.4 ಕೋಟಿ ನಿವಾಸಿಗಳ ಜೀವನಮಟ್ಟ ಸುಧಾರಿಸುವ ಕುರಿತು ಒತ್ತು ನೀಡಿದ ಸಚಿವರು, ರಸ್ತೆ, ಕಸ ನಿರ್ವಹಣೆ, ಒಳಚರಂಡಿ, ನೀರು ನಿಲ್ಲುವುದು ಮತ್ತು ಸ್ವಚ್ಛತೆಯಂತಹ ದೈನಂದಿನ ಸಮಸ್ಯೆಗಳ ಬಗ್ಗೆ ನಾಗರಿಕ ಸಂಸ್ಥೆಗಳು ಹೆಚ್ಚು ಗಮನಹರಿಸಬೇಕು ಎಂದರು. “ಈ ಸವಾಲುಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬಿಬಿಎಂಪಿಯನ್ನು ಐದು ನಿಗಮಗಳಾಗಿ ವಿಭಜಿಸಲಾಗಿದೆ. ನಾಗರಿಕರ ದೈನಂದಿನ ಬದುಕು ಸುಧಾರಿಸುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಶ್ಲಾಘನೆ ಮತ್ತು ಹೊರವಲಯದ ಅಭಿವೃದ್ಧಿ
ಬೆಂಗಳೂರು ನಗರಾಭಿವೃದ್ಧಿ ಖಾತೆಯ ತಮ್ಮ ಪೂರ್ವಾಧಿಕಾರಿಯಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶ್ಲಾಘಿಸಿದ ಕೃಷ್ಣ ಬೈರೇಗೌಡ, ದೀರ್ಘಕಾಲೀನ ಸುಧಾರಣೆಗಳಿಗೆ ಅವರು ಈಗಾಗಲೇ ಅಡಿಪಾಯ ಹಾಕಿದ್ದಾರೆ ಎಂದರು. “ಅವರು ಎಲ್ಲಾ ಕಠಿಣ ಕೆಲಸಗಳನ್ನು ಮಾಡಿದ್ದಾರೆ. ಈಗ, ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ನನಗೆ ಸಮಯ ಸಿಕ್ಕಿದೆ. ನಾನು ವಿಷಯವಾರು ಮತ್ತು ಕಾರ್ಪೊರೇಷನ್‌ವಾರು ಸಭೆಗಳು ಹಾಗೂ ತಪಾಸಣೆಗಳನ್ನು ಕಟ್ಟುನಿಟ್ಟಾಗಿ ನಡೆಸುತ್ತೇನೆ” ಎಂದು ಹೇಳಿದರು.
ಹೆಚ್ಚುವರಿ ವೈಟ್-ಟಾಪಿಂಗ್ ಯೋಜನೆಗಳಿಗಾಗಿ ವಿಸ್ತೃತ ಯೋಜನಾ ವರದಿಗಳು (DPR) ಸಿದ್ಧವಾಗುತ್ತಿದ್ದು, ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಐತಿಹಾಸಿಕವಾಗಿ ಬೆಂಗಳೂರಿನ ಪ್ರಮುಖ (ಕೇಂದ್ರ) ಪ್ರದೇಶಗಳ ಮೂಲಸೌಕರ್ಯಗಳ ಮೇಲೆ ಹೆಚ್ಚು ಹೂಡಿಕೆ ಮಾಡಲಾಗಿದೆ, ಆದರೆ ವೇಗವಾಗಿ ಬೆಳೆಯುತ್ತಿರುವ ಹೊರವಲಯದ ಪ್ರದೇಶಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ ಎಂಬುದನ್ನು ಸಚಿವರು ಒಪ್ಪಿಕೊಂಡರು. “ಹೆಚ್ಚಿನ ಸಮಸ್ಯೆಗಳು ಹೊರವಲಯದ ಪ್ರದೇಶಗಳಲ್ಲಿವೆ. ಇದರ ಜೊತೆಗೆ, ಬಿಡಬ್ಲ್ಯುಎಸ್‌ಎಸ್‌ಬಿ (BWSSB) ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದು, ಹೊರವಲಯದ ಅನೇಕ ರಸ್ತೆಗಳನ್ನು ಅಗೆಯಲಾಗುತ್ತಿದೆ. ನಗರವು ನಿರಂತರವಾಗಿ ವಿಸ್ತರಿಸುತ್ತಿರುವುದರಿಂದ ಮೂಲಸೌಕರ್ಯಗಳ ಮೇಲಿನ ಒತ್ತಡ ಬಹಳ ಹೆಚ್ಚಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.
