ಮೈಸೂರು: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮತ್ತು ಸಣ್ಣ ವಯಸ್ಸಿನ ಮಕ್ಕಳಲ್ಲಿ ಹಠಾತ್ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚಾಗುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು (Marimallappa College) ಕ್ಯಾಂಪಸ್‌ನಲ್ಲೇ ಹೃದಯಾಘಾತದಿಂದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸಾ*ವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಘಟನೆಯ ವಿವರ ಮತ್ತು ಹಿನ್ನೆಲೆ
ಮೃ*ತ ದುರ್ದೈವಿ ವಿದ್ಯಾರ್ಥಿಯನ್ನು ಮಾದೇಶ್ ಎಂದು ಗುರುತಿಸಲಾಗಿದೆ. ಈತ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನವನಾಗಿದ್ದು, ಸದ್ಯ ಮೈಸೂರಿನಲ್ಲಿ ತನ್ನ ಅಕ್ಕನ ಜೊತೆ ವಾಸವಿದ್ದುಕೊಂಡು ಮರಿಮಲ್ಲಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ಎಂದಿನಂತೆ ಕಾಲೇಜಿಗೆ ಬಂದಿದ್ದ ಮಾದೇಶ್, ಕ್ಯಾಂಪಸ್‌ನಲ್ಲಿ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾನೆ.
ವಿದ್ಯಾರ್ಥಿ ದಿಢೀರನೆ ಕುಸಿದುಬೀಳುತ್ತಿದ್ದಂತೆ ಗಾಬರಿಗೊಂಡ ಕಾಲೇಜಿನ ಸಿಬ್ಬಂದಿ ಹಾಗೂ ಸಹಪಾಠಿಗಳು ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಯತ್ನಿಸಿದರೂ, ಯಾವುದೇ ಪ್ರಯೋಜನವಾಗದೆ ಮಾದೇಶ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಮಗನನ್ನು ಕಳೆದುಕೊಂಡ ಹೆತ್ತವರು ಹಾಗೂ ಅಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ಮರುಕಳಿಸಿದ ಶಿವಮೊಗ್ಗದ 6 ವರ್ಷದ ಬಾಲಕನ ಸಾವಿನ ನೆನಪು
ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗುತ್ತಿರುವ ಇಂತಹ ಪ್ರಕರಣಗಳು ಸಾರ್ವಜನಿಕರಲ್ಲಿ ತೀವ್ರ ಭಯ ಹುಟ್ಟಿಸಿವೆ. ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಟವಾಡುತ್ತಿದ್ದ 6 ವರ್ಷದ ಪುಟ್ಟ ಬಾಲಕನೊಬ್ಬ ಇದೇ ರೀತಿ ಮೃತಪಟ್ಟಿದ್ದನು.
ಕೊಡನವಳ್ಳಿಯ ಗೌತಮ್ ಮತ್ತು ಶಿಲ್ಪಾ ದಂಪತಿಯ ಪುತ್ರ ತ್ರಿಲೋಕ್ ಜೈನ್ (6) ಶಾಲಾ ಮೈದಾನದಲ್ಲಿ ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಏಕಾಏಕಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದನು. ಗಾಬರಿಗೊಂಡ ಶಿಕ್ಷಕರು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದರೂ, ಮಾರ್ಗಮಧ್ಯೆ ಆ ಕಂದಮ್ಮ ಕೊನೆಯುಸಿರೆಳೆದಿದ್ದನು. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಆ ಬಾಲಕನೂ ತೀವ್ರ ಹೃದಯಾಘಾತದಿಂದಲೇ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲೇ ಹಠಾತ್ ಹೃದಯಾಘಾತ ಸಂಭವಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
