S Shorts

ನಡುರಸ್ತೆಯಲ್ಲೇ ತಲ್ವಾರ್‌ನಿಂದ 5 ಕೆಜಿ ಕೇಕ್ ಕತ್ತರಿಸಿದ ಪುಂಡರು; ವಿಡಿಯೋ ವೈರಲ್

ನಡುರಸ್ತೆಯಲ್ಲೇ ತಲ್ವಾರ್‌ನಿಂದ 5 ಕೆಜಿ ಕೇಕ್ ಕತ್ತರಿಸಿದ ಪುಂಡರು; ವಿಡಿಯೋ ವೈರಲ್
Author: Meghana Gowda
Posted By: Meghana Gowda
Updated: Jun 19, 2026 | 12:55 PM

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಯುವಕರ ಗುಂಪೊಂದು ನಡುರಸ್ತೆಯಲ್ಲಿ ರೌಡಿಗಳ ಶೈಲಿಯಲ್ಲಿ ಹುಟ್ಟುಹಬ್ಬ ಆಚರಿಸಿ ಪುಂಡಾಟ ಮೆರೆದ ಘಟನೆ ಬೆಳಕಿಗೆ ಬಂದಿದೆ. ನಗರದ ವಾಜಪೇಯಿ ಲೇಔಟ್‌ನಲ್ಲಿ ತಲ್ವಾರ್‌ನಿಂದ ಬೃಹತ್ ಕೇಕ್ ಕತ್ತರಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಯುವಕನ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಚಿಕ್ಕಮಗಳೂರಿನ ವಾಜಪೇಯಿ ಲೇಔಟ್‌ನಲ್ಲಿ ಮಧ್ಯರಾತ್ರಿ ಈ ಹೈಡ್ರಾಮಾ ನಡೆದಿದೆ. ಮಹಮದ್ ಸಮೀರ್ ಎಂಬ ಯುವಕ ಸಿನಿಮೀಯ ಶೈಲಿಯಲ್ಲಿ ಕಾರಿನಿಂದ ಕೆಳಗಿಳಿದು, ಕೈಯಲ್ಲಿ ಲಾಂಗ್ (ತಲ್ವಾರ್) ಹಿಡಿದು ರಸ್ತೆಯಲ್ಲೇ ನಿಂತಿದ್ದ ಸಾರ್ವಜನಿಕರನ್ನು ಹೆದರಿಸುವಂತೆ ಪೋಸ್ ಕೊಟ್ಟಿದ್ದಾನೆ. ನಂತರ ರಸ್ತೆ ಮಧ್ಯದಲ್ಲೇ ಇಟ್ಟಿದ್ದ ಸುಮಾರು 5 ಕೆಜಿಗೂ ಅಧಿಕ ತೂಕದ ಬೃಹತ್ ಕೇಕ್ ಅನ್ನು ತಲ್ವಾರ್‌ನಿಂದ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈ ವೇಳೆ ಆತನ ಜೊತೆ 10ಕ್ಕೂ ಹೆಚ್ಚು ಯುವಕರ ಗುಂಪು ಇತ್ತು ಎನ್ನಲಾಗಿದೆ.

ಈ ಇಡೀ ಪುಂಡಾಟವನ್ನು ಯುವಕರ ಗುಂಪು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿತ್ತು. ಅಲ್ಲದೆ, ತಾವೇ ಗತ್ತಿನಿಂದ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣವೇ ಎಚ್ಚೆತ್ತ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು, ಸಾರ್ವಜನಿಕ ರಸ್ತೆಯಲ್ಲಿ ಮಾರಕಾಸ್ತ್ರ ಪ್ರದರ್ಶನ ಮಾಡಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಹಾಗೂ ಶಾಂತಿ ಭಂಗ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಹಮದ್ ಸಮೀರ್ ಮತ್ತು ಆತನ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.