S Shorts

ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ Drifting ಪುಂಡಾಟ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸ್ ಸಮನ್ಸ್!

ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ Drifting ಪುಂಡಾಟ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸ್ ಸಮನ್ಸ್!
Author: Sagaradventure
Posted By: Sagaradventure
Updated: Mar 22, 2026 | 8:58 PM

ಬೆಂಗಳೂರು: ನಗರದ ಪ್ರತಿಷ್ಠಿತ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ ಮಾಡಿ ಪುಂಡಾಟಿಕೆ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಕೆಎ 05 NR 0009 ನೋಂದಣಿ ಸಂಖ್ಯೆಯ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಜಪ್ತಿ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಡ್ರಿಫ್ಟಿಂಗ್ ಪ್ರಕರಣದಲ್ಲಿ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರು ಕಾರು ಚಲಾಯಿಸುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ರಿಕ್ಕಿ ರೈ ಅವರಿಗೆ ಅಧಿಕೃತವಾಗಿ ಸಮನ್ಸ್ ಜಾರಿ ಮಾಡಿದ್ದು, ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸದ್ಯ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ರವಿ ಅವರ ನೇತೃತ್ವದಲ್ಲಿ ಈ ಪ್ರಕರಣದ ತೀವ್ರ ತನಿಖೆ ನಡೆಯುತ್ತಿದೆ.

ಅನಿಲ್ ಕುಂಬ್ಳೆ ವೃತ್ತದಲ್ಲಿ 2 ರಿಂದ 3 ಬಾರಿ ವೃತ್ತಾಕಾರವಾಗಿ ಕಾರು ಡ್ರಿಫ್ಟಿಂಗ್ ಮಾಡಿರುವ ಬಗ್ಗೆ ಸ್ಪಷ್ಟವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಈಗಾಗಲೇ ಕಲೆಹಾಕಿದ್ದಾರೆ. ಇದಲ್ಲದೆ, ಈ ದುಬಾರಿ ಕಾರಿನ ಅಧಿಕೃತ ದಾಖಲೆಗಳು ವಾಸ್ತವವಾಗಿ ಯಾರ ಹೆಸರಿನಲ್ಲಿವೆ ಮತ್ತು ವಿಮಾ ಮಾಹಿತಿಗಳನ್ನು ನಿಖರವಾಗಿ ಪರಿಶೀಲಿಸಲು ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳಿಗೂ ಪೊಲೀಸರು ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ರಿಕ್ಕಿ ರೈ ಅವರ ವಿಚಾರಣೆ ಬಳಿಕವಷ್ಟೇ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಹೊರಬೀಳಬೇಕಿದೆ.