S Shorts

ಬೆಂಗಳೂರಿಗರೇ ಗಮನಿಸಿ: ವಿಶ್ವದಲ್ಲೇ 2ನೇ ಅತಿ ಹೆಚ್ಚು Traffic ದಟ್ಟಣೆಯ ನಗರ `ನಮ್ಮ ಬೆಂಗಳೂರು’!

ಬೆಂಗಳೂರಿಗರೇ ಗಮನಿಸಿ: ವಿಶ್ವದಲ್ಲೇ 2ನೇ ಅತಿ ಹೆಚ್ಚು Traffic ದಟ್ಟಣೆಯ ನಗರ `ನಮ್ಮ ಬೆಂಗಳೂರು’!
Author: Sagaradventure
Posted By: Sagaradventure
Updated: Jan 22, 2026 | 7:52 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆಯಾದರೂ, ಸಂಚಾರ ದಟ್ಟಣೆಯ ವಿಚಾರದಲ್ಲಿ ಮಾತ್ರ ಕುಖ್ಯಾತಿ ಗಳಿಸುತ್ತಲೇ ಸಾಗಿದೆ. 2025ರ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ (TomTom Traffic Index) ವರದಿಯ ಪ್ರಕಾರ, ಮೆಕ್ಸಿಕೋ ಸಿಟಿಯ ನಂತರ ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ.

ಕರ್ನಾಟಕ ಸರ್ಕಾರ ಬೆಂಗಳೂರನ್ನು ಜಾಗತಿಕ ಮಟ್ಟದ ತಂತ್ರಜ್ಞಾನ ಸ್ನೇಹಿ ನಗರವನ್ನಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದರೂ, ವಾಸ್ತವದಲ್ಲಿ ನಗರದ ಟ್ರಾಫಿಕ್ ಸ್ಥಿತಿ ವರ್ಷದಿಂದ ವರ್ಷಕ್ಕೆ ಹದಗೆಡುತ್ತಿದೆ. 2023ರಲ್ಲಿ 6ನೇ ಸ್ಥಾನದಲ್ಲಿದ್ದ ಬೆಂಗಳೂರು, 2024ರಲ್ಲಿ 3ನೇ ಸ್ಥಾನಕ್ಕೆ ಏರಿತ್ತು. ಇದೀಗ 2025ರಲ್ಲಿ 2ನೇ ಸ್ಥಾನಕ್ಕೆ ತಲುಪುವ ಮೂಲಕ ವಾಹನ ಸವಾರರ ಪಾಲಿಗೆ ನರಕಸದೃಶವಾಗಿದೆ.

ವರದಿಯ ಅಂಕಿಅಂಶಗಳು ಆತಂಕಕಾರಿಯಾಗಿದ್ದು, ಪೀಕ್ ಅವರ್‌ನಲ್ಲಿ (ದಟ್ಟಣೆ ಅವಧಿ) ಸರಾಸರಿ ವಾಹನ ಚಲನೆಯ ವೇಗ ಗಂಟೆಗೆ 13.9 ಕಿ.ಮೀ.ಗೆ ಕುಸಿದಿದೆ. ಇದು ಕಳೆದ ವರ್ಷಕ್ಕಿಂತ 1 ಕಿ.ಮೀ.ನಷ್ಟು ಕಡಿಮೆಯಾಗಿದೆ. ವಾಹನ ಸವಾರರು ಕೇವಲ 10 ಕಿ.ಮೀ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು 2024ಕ್ಕಿಂತ 2 ನಿಮಿಷ ಹೆಚ್ಚಾಗಿದೆ. ನಗರದ ದಟ್ಟಣೆ ಮಟ್ಟವು 74.4% ರಷ್ಟಿದ್ದು, ವಾಹನ ಬಳಕೆದಾರರು ವರ್ಷಕ್ಕೆ ಸರಾಸರಿ 168 ಗಂಟೆಗಳ ಅಮೂಲ್ಯ ಸಮಯವನ್ನು ಟ್ರಾಫಿಕ್‌ನಲ್ಲೇ ಕಳೆಯುತ್ತಿದ್ದಾರೆ.

ಭಾರತದ ಇತರೆ ನಗರಗಳ ಕಥೆಯೇನು? 

ಜಾಗತಿಕ ಪಟ್ಟಿಯಲ್ಲಿ ಐರ್ಲೆಂಡ್‌ನ ಡಬ್ಲಿನ್ ಬೆಂಗಳೂರಿನ ನಂತರದ ಸ್ಥಾನದಲ್ಲಿದೆ. ಭಾರತದ ಪುಣೆ ನಗರವು 5ನೇ ಸ್ಥಾನದಲ್ಲಿದ್ದರೆ, ಮುಂಬೈ 18ನೇ ಸ್ಥಾನದಲ್ಲಿದೆ. ಪುಣೆ ಮತ್ತು ಮುಂಬೈನಲ್ಲಿ ಸರಾಸರಿ ವೇಗ ಕ್ರಮವಾಗಿ 18 ಕಿ.ಮೀ ಮತ್ತು 20.8 ಕಿ.ಮೀ ಇದೆ.

ವರ್ಷದ ಅತ್ಯಂತ ಕೆಟ್ಟ ಟ್ರಾಫಿಕ್ ದಿನ: 

ಮೇ 17, ಶನಿವಾರದಂದು ಬೆಂಗಳೂರು ವರ್ಷದ ಅತ್ಯಂತ ಕೆಟ್ಟ ಟ್ರಾಫಿಕ್ ದಟ್ಟಣೆಯನ್ನು ಕಂಡಿದೆ ಎಂದು ವರದಿ ಉಲ್ಲೇಖಿಸಿದೆ. ಅಂದು ದಟ್ಟಣೆ ಮಟ್ಟ 101% ತಲುಪಿತ್ತು ಮತ್ತು ಸಂಜೆ ವೇಳೆ ಕೇವಲ 2.5 ಕಿ.ಮೀ ಕ್ರಮಿಸಲು ಚಾಲಕರು 15 ನಿಮಿಷ ಪರದಾಡಬೇಕಾಯಿತು. ಇನ್ನು ಬೆಳಗಿನ ದಟ್ಟಣೆ ಸಮಯದಲ್ಲಿ 10 ಕಿ.ಮೀ ಕ್ರಮಿಸಲು 41 ನಿಮಿಷ ಬೇಕಾದರೆ, ಸಂಜೆ ಅದೇ ದೂರಕ್ಕೆ 45 ನಿಮಿಷ ಬೇಕಾಗುತ್ತದೆ ಎಂಬುದು ವರದಿಯ ಸಾರಾಂಶ.