ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹಪಾಹಪಿ ಕೇರಳದ ವಿದ್ಯಾರ್ಥಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ರೀಲ್ಸ್ ಮಾಡುವ ಹುಚ್ಚಿಗೆ ಬಿದ್ದ ಈತ, ತಾನು ಓಡಿಸುತ್ತಿದ್ದ ಕಾರಿನ ಮೌಲ್ಯಕ್ಕಿಂತಲೂ ಹೆಚ್ಚಿನ ದಂಡವನ್ನು ಬೆಂಗಳೂರು ಪೊಲೀಸರಿಗೆ ತೆರುವಂತಾಗಿದೆ.
ಘಟನೆಯ ವಿವರಕ್ಕೆ ಬರುವುದಾದರೆ, ಕೇರಳದ ಕಣ್ಣೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೇವಲ 70,000 ರೂ. ಕೊಟ್ಟು 2002ರ ಮಾಡೆಲ್‌ನ ಹಳೆಯ ಹೋಂಡಾ ಸಿಟಿ ಕಾರನ್ನು ಖರೀದಿಸಿದ್ದ. ಆದರೆ ಅದನ್ನು ‘ಮಾಡಿಫೈ’ ಮಾಡುವ ನೆಪದಲ್ಲಿ ವಿಚಿತ್ರವಾಗಿ ಬದಲಾಯಿಸಿದ್ದ. ಕಾರಿನ ಬಣ್ಣ ಬದಲಾಯಿಸಿ, “ಬ್ಯಾಂಗರ್” (Banger) ಎಂದು ಬರೆಸಿ, ಮೆಕ್ಯಾನಿಕಲ್ ಭಾಗಗಳನ್ನು ಅಕ್ರಮವಾಗಿ ಬದಲಾಯಿಸಿದ್ದಲ್ಲದೆ, ಸೈಲೆನ್ಸರ್ ನಿಂದ ಬೆಂಕಿ ಬರುವಂತೆ (fire-spitting exhaust) ಮಾಡಿದ್ದ. ಮೋಟಾರು ವಾಹನ ಕಾಯ್ದೆಯಡಿ ಇಂತಹ ಮಾರ್ಪಾಡುಗಳು ಕಾನೂನುಬಾಹಿರ ಮತ್ತು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ.
ಹೊಸ ವರ್ಷಾಚರಣೆಗೆಂದು ಬೆಂಗಳೂರಿಗೆ ಬಂದಿದ್ದ ಈ ವಿದ್ಯಾರ್ಥಿ, ನಗರದ ರಸ್ತೆಗಳಲ್ಲಿ ತನ್ನ ವಿಚಿತ್ರ ಕಾರನ್ನು ಓಡಿಸುತ್ತಾ, ಸೈಲೆನ್ಸರ್ ನಿಂದ ಬೆಂಕಿ ಉಗುಳುವ ಮತ್ತು ಕರ್ಕಶ ಶಬ್ದ ಮಾಡುವ ದೃಶ್ಯಗಳನ್ನು ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಿ ಹರಿಬಿಟ್ಟಿದ್ದ. ಈ ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಇದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಮತ್ತು ಸುರಕ್ಷತೆಯ ಬಗ್ಗೆ ಸ್ಥಳೀಯರು ಹಾಗೂ ವಾಹನ ಸವಾರರು ಪೊಲೀಸರಿಗೆ ದೂರು ನೀಡಿದ್ದರು.
ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಸಂಚಾರ ಪೊಲೀಸರು, ಈಶಾನ್ಯ ಬೆಂಗಳೂರಿನ ಭಾರತೀಯ ಸಿಟಿಯಲ್ಲಿ ಕಾರನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಯಲಹಂಕ ಆರ್‌ಟಿಒ (RTO) ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ, ಅಕ್ರಮವಾಗಿ ಎಕ್ಸಾಸ್ಟ್ ಬದಲಾವಣೆ, ಅನುಮತಿಯಿಲ್ಲದೆ ಬಣ್ಣ ಬದಲಾವಣೆ, ಮತ್ತು ವಾಹನದ ರಚನೆಯಲ್ಲಿಯೇ ಅಪಾಯಕಾರಿ ಮಾರ್ಪಾಡುಗಳನ್ನು ಮಾಡಿರುವುದು ಕಂಡುಬಂದಿದೆ.
ನಿಯಮ ಉಲ್ಲಂಘನೆಗಾಗಿ ಅಧಿಕಾರಿಗಳು ವಿದ್ಯಾರ್ಥಿಗೆ ಬರೋಬ್ಬರಿ 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ವಿಶೇಷವೆಂದರೆ, ಈ ದಂಡದ ಮೊತ್ತವು ಆತ ಕಾರು ಖರೀದಿಸಿದ ಬೆಲೆಗಿಂತಲೂ ಹೆಚ್ಚಾಗಿದೆ. ದಂಡ ಪಾವತಿಸಿದ ವಿದ್ಯಾರ್ಥಿಗೆ ಇಂತಹ ಸಾಹಸಗಳನ್ನು ಮರುಕಳಿಸದಂತೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೇರಳದಲ್ಲಿ ಒಂದು ವರ್ಷದಿಂದ ಇದೇ ಕಾರನ್ನು ಓಡಿಸುತ್ತಿದ್ದರೂ ಅಲ್ಲಿನ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ, ಆದರೆ ಬೆಂಗಳೂರಿನಲ್ಲಿ ಕಠಿಣ ಕ್ರಮ ಎದುರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. “ರೀಲ್ಸ್ ಕ್ರೇಜ್‌ಗಾಗಿ ಕಾರಿನ ಬೆಲೆಗಿಂತ ಹೆಚ್ಚು ದಂಡ ಕಟ್ಟುವಂತಾಯಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾರ್ಮಿಕವಾಗಿ ಹೇಳಿದ್ದಾರೆ.
