S Shorts

ಮುರಿನಕಟ್ಟೆ ಧ್ವಂಸ ಖಂಡಿಸಿ ಬೃಹತ್ ಪ್ರತಿಭಟನೆ, “ಕಟ್ಟೆ ಕಟ್ಟದಿದ್ದರೆ ನಾನೇ ಬರುತ್ತೇನೆ” ಎಂದು ಗುಡುಗಿದ R.Ashok

ಮುರಿನಕಟ್ಟೆ ಧ್ವಂಸ ಖಂಡಿಸಿ ಬೃಹತ್ ಪ್ರತಿಭಟನೆ, “ಕಟ್ಟೆ ಕಟ್ಟದಿದ್ದರೆ ನಾನೇ ಬರುತ್ತೇನೆ” ಎಂದು ಗುಡುಗಿದ R.Ashok
Author: Sagaradventure
Posted By: Sagaradventure
Updated: May 29, 2026 | 4:51 PM

ಭಟ್ಕಳ: ನಗರದ ಮುರಿನಕಟ್ಟೆ ಧ್ವಂಸವನ್ನು ಖಂಡಿಸಿ ಹಾಗೂ ಅದರ ಮರುಸ್ಥಾಪನೆಗೆ ಆಗ್ರಹಿಸಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಭಟ್ಕಳ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹಿಂದೂಗಳ ಧ್ವನಿಯಾಗಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರವು ಆ ಕಟ್ಟೆಯನ್ನು ಕಟ್ಟದಿದ್ದರೆ ನಾವೇ ಕಟ್ಟುತ್ತೇವೆ, ಅದಕ್ಕಾಗಿ ನಾನೇ ಖುದ್ದಾಗಿ ಭಟ್ಕಳಕ್ಕೆ ಬರುತ್ತೇನೆ ಎಂದು ಅವರು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯ ರಾಮಮಂದಿರ ಹೋರಾಟದಲ್ಲಿ 21 ದಿನಗಳ ಕಾಲ ಪಾಲ್ಗೊಂಡಿದ್ದನ್ನು ಹಾಗೂ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದನ್ನು ಸ್ಮರಿಸಿದರು. ತಮಗೆ ಒಡೆಯುವುದೂ ಗೊತ್ತಿದೆ ಹಾಗೂ ಕಟ್ಟುವುದೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದ ಅವರು, ಈ ವಿಚಾರವಾಗಿ ತಾವು ಎಸ್ಪಿ ಅವರಿಗೂ ಕರೆ ಮಾಡಿ ಮಾತನಾಡಿದ್ದಾಗಿ ತಿಳಿಸಿದರು. ಈ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಕೇವಲ ಬಂಧಿಸಿದರೆ ಸಾಲದು, ಬದಲಾಗಿ ಅವರನ್ನು ತಕ್ಷಣವೇ ಗಡಿಪಾರು ಮಾಡಬೇಕು ಎಂದು ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದರು.

ದೇಶದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಆರ್. ಅಶೋಕ್, ದೇಶದಲ್ಲಿ 2 ಕೋಟಿ ಮತ್ತು ಕರ್ನಾಟಕದಲ್ಲಿ 10 ಲಕ್ಷ ಬಾಂಗ್ಲಾದೇಶಿಯರಿದ್ದಾರೆ, ಭಟ್ಕಳದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಇವರಿಗೆ ಆಧಾರ್ ಮತ್ತು ರೇಷನ್ ಕಾರ್ಡ್ ನೀಡಿದ್ದರು. ಆದರೆ ಈಗ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಅವರನ್ನು ಗಡಿಪಾರು ಮಾಡುತ್ತಿದೆ. ನಮ್ಮ ದೇಶದ ಅನ್ನ, ನೀರು ಉಂಡು, ವಿದೇಶಿ ಹಣದಿಂದ ಇಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವವರನ್ನು ದೇಶದಿಂದ ಓಡಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಹಿಂದೂ ವಿರೋಧಿಗಳು ಎಂದು ಟೀಕಿಸಿದರು. ಮಂಗಳೂರಿನಲ್ಲಿ 25 ಕ್ಕೂ ಹೆಚ್ಚು ಹಿಂದೂಗಳನ್ನು ಕೊಲ್ಲುವ ಉದ್ದೇಶದಿಂದ ಕುಕ್ಕರ್ ಬಾಂಬ್ ತಂದಿದ್ದ ಉಗ್ರನನ್ನು ಡಿ.ಕೆ. ಶಿವಕುಮಾರ್ ಅವರು ನನ್ನ ಬ್ರದರ್ ಎಂದಿದ್ದರು ಎಂದು ವಾಗ್ದಾಳಿ ನಡೆಸಿದರು. 

ಈ ಸರ್ಕಾರ ಹಿಂದೂಗಳಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಪಿಂಚಣಿಗಾಗಿ 800 ಕೋಟಿ ರೂಪಾಯಿಗಳನ್ನು ನೀಡುವ ಈ ಸರ್ಕಾರಕ್ಕೆ, ಹಿಂದೂಗಳಿಗೆ ಸಹಾಯ ಮಾಡಲು ಮಾತ್ರ ಕೈ ಬರುವುದಿಲ್ಲ. ಇವರು ಹಿಂದೂಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಆರ್. ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು