ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಗಾದಿಯ ಕುರಿತಾದ ಕುತೂಹಲ ತಾರಕಕ್ಕೇರಿರುವ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಖುದ್ದಾಗಿ ದೂರವಾಣಿ ಕರೆ ಮಾಡಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅವರ ಆಪ್ತ ಜ್ಯೋತಿಷಿ ಡಾ.ಬಿ.ಪಿ. ಆರಾಧ್ಯ ಅವರ ಸಲಹೆಯ ಮೇರೆಗೆ ಇದೇ ಜೂನ್ 5ರಂದು ಡಿಕೆಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ಈ ಮಹತ್ವದ ಬೆಳವಣಿಗೆಗಳ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜ್ಯೋತಿಷಿ ಡಾ.ಬಿ.ಪಿ. ಆರಾಧ್ಯ ಅವರು, ಡಿ.ಕೆ. ಶಿವಕುಮಾರ್ ಅವರ ಭವಿಷ್ಯದ ಬಗ್ಗೆ ಅಚ್ಚರಿಯ ನುಡಿಗಳನ್ನಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಮುಂದಿನ 7 ವರ್ಷಗಳ ಕಾಲ ಪ್ರಬಲವಾದ ರಾಜಯೋಗವಿದ್ದು, ಅವರು 2028ರವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಅಧಿಕ ಮಾಸದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವಂತೆ ತಾವು ಅವರಿಗೆ ವಿಶೇಷ ಸಲಹೆ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ವಾಸ್ತು ಹಾಗೂ ಜ್ಯೋತಿಷ್ಯದ ಪ್ರಕಾರ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳುವಂತೆಯೂ ಡಿಕೆಶಿಗೆ ಸೂಚಿಸಲಾಗಿದೆ. ಇದರ ಭಾಗವಾಗಿ, ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯನ್ನು ರಿಪೇರಿ ಮಾಡುವಂತೆ ಹಾಗೂ ಅಗತ್ಯ ಬದಲಾವಣೆಗಳನ್ನು ತರುವಂತೆ ತಾವು ಸಲಹೆ ನೀಡಿರುವುದಾಗಿ ಡಾ. ಬಿ.ಪಿ. ಆರಾಧ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ, ಡಿ.ಕೆ. ಶಿವಕುಮಾರ್ ಅವರ ಸಿಎಂ ಪಟ್ಟದ ಕನಸು ನನಸಾಗುವ ಕಾಲ ಹತ್ತಿರವಾಗಿದ್ದು, ರಾಜ್ಯದ ಜನತೆಯ ಚಿತ್ತ ಇದೀಗ ಜೂನ್ 5ರತ್ತ ನೆಟ್ಟಿದೆ.
