S Shorts

Davanagereಯಲ್ಲಿ ಸಮರ್ಥ ಶಾಮನೂರು ಬಿಗ್ ಮೂವ್: ಟಿಕೆಟ್ ಅನೌನ್ಸ್ ಆಗೋ ಮುನ್ನವೇ ನಾಮಪತ್ರ ಸಲ್ಲಿಕೆ!

Davanagereಯಲ್ಲಿ ಸಮರ್ಥ ಶಾಮನೂರು ಬಿಗ್ ಮೂವ್: ಟಿಕೆಟ್ ಅನೌನ್ಸ್ ಆಗೋ ಮುನ್ನವೇ ನಾಮಪತ್ರ ಸಲ್ಲಿಕೆ!
Author: Meghana Gowda
Posted By: Meghana Gowda
Updated: Mar 20, 2026 | 10:59 AM

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ (SS Mallikarjun) ಅವರ ಪುತ್ರ ಸಮರ್ಥ ಶಾಮನೂರು (Samarth Shamanur) ಇಂದು (ಮಾರ್ಚ್ 20, 2026) ಅಚ್ಚರಿಯ ನಡೆ ಇಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ಇನ್ನೂ ಬಿ ಫಾರಂ ಸಿಗದಿದ್ದರೂ, ಅವರು ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ.

ದೈವಬಲದೊಂದಿಗೆ ಚುನಾವಣಾ ಅಖಾಡಕ್ಕೆ:

ಯಾವುದೇ ವಿಘ್ನ ಬಾರದಿರಲಿ ಎಂದು ಸಮರ್ಥ ಶಾಮನೂರು ಇಂದು ಬೆಳ್ಳಂಬೆಳಿಗ್ಗೆಯೇ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.  ಮೊದಲು ತಮ್ಮ ಮನೆದೇವರಾದ ಎಮ್ಮಿಗನೂರು ಕಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.  ಅಲ್ಲಿಂದ ದಾವಣಗೆರೆಯ ಗ್ರಾಮದೇವತೆ, ಶಕ್ತಿ ದೇವತೆ ದುಗ್ಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಮಧ್ಯಾಹ್ನ ರಾಹುಕಾಲ ಮುಗಿದ ನಂತರ, ಅಂದರೆ ಸುಮಾರು 12 ಗಂಟೆಯ ನಂತರ ಸಮರ್ಥ ಶಾಮನೂರು ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಕುಟುಂಬ ಸದಸ್ಯರು ಮತ್ತು ಆಪ್ತ ಕಾರ್ಯಕರ್ತರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸುತ್ತಿರುವುದು ಯಾಕೆ?

ಕಾಂಗ್ರೆಸ್‌ನಲ್ಲಿ ಇನ್ನೂ ಅಭ್ಯರ್ಥಿ ಆಯ್ಕೆ ಕಗ್ಗಂಟು ಮುಂದುವರಿದಿದೆ. ವಿಶೇಷವಾಗಿ ಮುಸ್ಲಿಂ ಸಮುದಾಯದ ಮುಖಂಡರು ತಮಗೇ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಂತಹ ಭಾರಿ ವಿರೋಧದ ನಡುವೆಯೂ ಸಮರ್ಥ ಶಾಮನೂರು ನಾಮಪತ್ರ ಸಲ್ಲಿಸುತ್ತಿರುವುದು ಹೈಕಮಾಂಡ್‌ಗೆ ಒಂದು ರೀತಿಯ ‘ಪರೋಕ್ಷ ಸಂದೇಶ’ ರವಾನಿಸಿದಂತೆ ಕಾಣುತ್ತಿದೆ. ಬಿಜೆಪಿ ಈಗಾಗಲೇ ಶ್ರೀನಿವಾಸ ದಾಸ್ ಕರಿಯಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದರೆ ಕಾಂಗ್ರೆಸ್‌ನಲ್ಲಿ ತೀವ್ರ ಲಾಬಿ ನಡೆಯುತ್ತಿದ್ದು, ಸಮರ್ಥ ಅವರ ಈ ನಡೆ ಕಾಂಗ್ರೆಸ್ ವರಿಷ್ಠರ ನಿರ್ಧಾರದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.