ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಚ್ಚರಿಯ ಹಾಗೂ ಆಘಾತಕಾರಿ ಅಂಕಿ-ಅಂಶಗಳು ಹೊರಬಿದ್ದಿವೆ. ಒಂದೆಡೆ ಗುಂಡಿ ಮುಚ್ಚಲು ಬರೋಬ್ಬರಿ 1 ಲಕ್ಷ ರೂಪಾಯಿ ವೆಚ್ಚ ತೋರಿಸಿದ್ದರೆ, ಮತ್ತೊಂದೆಡೆ ಬಿಡಿಗಾಸೂ ಖರ್ಚಾಗದೆ ನೂರಾರು ಗುಂಡಿಗಳನ್ನು ಮುಚ್ಚಲಾಗಿದೆ! ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಹಾಗೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ಈ ಭಾರೀ ತಾರತಮ್ಯ ಮತ್ತು ಲೆಕ್ಕಾಚಾರದ ವ್ಯತ್ಯಾಸ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಗುಂಡಿ ಮುಚ್ಚಲು ಮಾಡಿದ ವೆಚ್ಚದ ವಿವರ:
| ವಿಧಾನಸಭಾ ಕ್ಷೇತ್ರ | ಪಾಲಿಕೆ ವ್ಯಾಪ್ತಿ | ಒಂದು ಗುಂಡಿ ಮುಚ್ಚಲು ಆದ ವೆಚ್ಚ | ವಿಶೇಷತೆ |
| ಚಾಮರಾಜಪೇಟೆ | – | ₹ 1,00,000 | ಅತಿ ಹೆಚ್ಚು ವೆಚ್ಚ |
| ಹೆಬ್ಬಾಳ | – | ₹ 1,231 | – |
| ದಾಸರಹಳ್ಳಿ | ಪಶ್ಚಿಮ ಪಾಲಿಕೆ | ₹ 24,144 | – |
| ದಾಸರಹಳ್ಳಿ | ಉತ್ತರ ಪಾಲಿಕೆ | ₹ 1,985 | ಒಂದೇ ಕ್ಷೇತ್ರದಲ್ಲಿ ಎರಡು ಪಾಲಿಕೆಗಳ ಅಜಗಜಾಂತರ |
| ಪದ್ಮನಾಭನಗರ | ಪಶ್ಚಿಮ ಪಾಲಿಕೆ | ₹ 22,123 | – |
| ಪದ್ಮನಾಭನಗರ | ದಕ್ಷಿಣ ಪಾಲಿಕೆ | ₹ 0 | 664 ಗುಂಡಿಗಳಿಗೆ 1 ಪೈಸೆಯೂ ಖರ್ಚಾಗಿಲ್ಲ! |
| ಜಯನಗರ | ದಕ್ಷಿಣ ಪಾಲಿಕೆ | ₹ 0 | 565 ಗುಂಡಿಗಳಿಗೆ 1 ಪೈಸೆಯೂ ಖರ್ಚಾಗಿಲ್ಲ! |
ಅಧಿಕೃತ ಮಾಹಿತಿ ಹೊರಬಿದ್ದಿದ್ದು ಹೇಗೆ?
ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ, 2026ರ ಮಾರ್ಚ್ 10ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಶಗಳು ಬಹಿರಂಗವಾಗಿವೆ.
ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 6 ತಿಂಗಳ ಅವಧಿಯಲ್ಲಿ ಬೆಂಗಳೂರಿನಾದ್ಯಂತ 39 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದ್ದು, ಇದಕ್ಕಾಗಿ ಒಟ್ಟು ₹33.85 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಆರ್. ಅಶೋಕ್ ತೀವ್ರ ವಾಗ್ದಾಳಿ:
ಈ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.
- ಗುಂಡಿಯಲ್ಲೇ ಮುಚ್ಚಿಹೋಯ್ತಾ 33 ಕೋಟಿ?: “ಒಂದೊಂದು ಗುಂಡಿ ಮುಚ್ಚಲು ಲಕ್ಷಗಟ್ಟಲೆ ಖರ್ಚು ಮಾಡಿದ್ದರೂ, ರಸ್ತೆ ಗುಂಡಿಗಳು ಮಾತ್ರ ಹಾಗೆಯೇ ಬಾಯ್ತೆರೆದುಕೊಂಡಿವೆ. ಮುಚ್ಚಿದ ಗುಂಡಿಗಳೆಲ್ಲವೂ ಮತ್ತೆ ತೆರೆದುಕೊಂಡಿದ್ದರೆ ಇವರು ಮುಚ್ಚಿದ್ದಾದರೂ ಏನು? ₹33 ಕೋಟಿ ಹಣ ಗುಂಡಿಯಲ್ಲೇ ಮುಚ್ಚಿ ಹೋಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ಕಿಡಿಕಾರಿದರು.
ಸ್ಥಳ ಪರಿಶೀಲನೆಗೆ ಸವಾಲು: “ಸರ್ಕಾರದವರು ಗುಂಡಿ ಮುಚ್ಚಿರುವ ಅಧಿಕೃತ ದಾಖಲೆಗಳನ್ನು ಹಿಡಿದುಕೊಂಡು ನಮ್ಮೊಂದಿಗೆ ಸ್ಥಳಕ್ಕೆ ಬರಲಿ, ಅಲ್ಲಿ ವಾಸ್ತವವಾಗಿ ಏನಾಗಿದೆ ಎಂದು ನಾವೇ ತೋರಿಸುತ್ತೇವೆ. ಗುಂಡಿಗಳು ತೆರೆದೇ ಇರುವುದರಿಂದ ನಿತ್ಯ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಜನತೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ” ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
