ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹಕ್ಕಿ ಜ್ವರದ (Avian Influenza) ಭೀತಿ ಎದುರಾಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದ ಪೌಲ್ಟ್ರಿ ಫಾರಂನಲ್ಲಿ ಅಪಾಯಕಾರಿ H5N1 ವೈರಸ್ ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಫಾರಂ ಅನ್ನು ತಕ್ಷಣವೇ ಬಂದ್ ಮಾಡಿದೆ.
ಏನಿದು ಘಟನೆ?
ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಸಿದ ತಪಾಸಣೆಯ ವೇಳೆ ಹೆಸರಘಟ್ಟದ ಫಾರಂನಲ್ಲಿದ್ದ ಕೋಳಿಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಫಾರಂನಿಂದ ರಾಜ್ಯದ ವಿವಿಧೆಡೆಗೆ ಕೋಳಿಗಳು ಸರಬರಾಜು ಆಗುತ್ತಿರುವುದರಿಂದ ಆತಂಕ ದುಪ್ಪಟ್ಟಾಗಿದೆ. ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ಈಗಾಗಲೇ ವೈದ್ಯಕೀಯ ನಿಗಾವಣೆಯಲ್ಲಿರಿಸಿ ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಹೆಸರಘಟ್ಟದ ಸುತ್ತಮುತ್ತಲಿನ 1 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿ ಶೆಡ್‌ಗಳಲ್ಲಿ ಕಡ್ಡಾಯ ತಪಾಸಣೆ ನಡೆಸಲು ಪಶುವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ತಜ್ಞರ ಪ್ರಕಾರ, ಬಿಸಿಲಿನ ತಾಪಮಾನ ಹೆಚ್ಚಾದಂತೆ ಈ ವೈರಸ್ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಎಚ್ಚರಿಕಾ ನೋಟಿಸ್ ನೀಡಲಾಗಿದ್ದು, ಕೋಳಿ ಅಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಸಲಾಗುತ್ತಿದೆ.
ಬರ್ಡ್ ಫ್ಲೂ ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ವೈದ್ಯರು ಸೂಚಿಸಿದ್ದಾರೆ
-
ಚೆನ್ನಾಗಿ ಬೇಯಿಸಿದ ಆಹಾರ: ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಕನಿಷ್ಠ 70°C ತಾಪಮಾನದಲ್ಲಿ ಚೆನ್ನಾಗಿ ಬೇಯಿಸಿ ನಂತರವೇ ಸೇವಿಸಿ.
-
ಹಸಿ ಆಹಾರಕ್ಕೆ ನಿಷೇಧ: ಹಸಿ ಮೊಟ್ಟೆ ಅಥವಾ ಸರಿಯಾಗಿ ಬೇಯಿಸದ ಮಾಂಸವನ್ನು ಸೇವಿಸಬೇಡಿ.
-
ಸ್ವಚ್ಛತೆ: ಮಾಂಸದ ಅಂಗಡಿಗಳಿಗೆ ಹೋದಾಗ ಅಥವಾ ಪಕ್ಷಿಗಳ ಸಂಪರ್ಕಕ್ಕೆ ಬಂದಾಗ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಚೆನ್ನಾಗಿ ತೊಳೆಯಿರಿ.
-
ನೇರ ಸಂಪರ್ಕ ಬೇಡ: ಮೃತಪಟ್ಟ ಅಥವಾ ಸೋಂಕಿತ ಹಕ್ಕಿಗಳನ್ನು ಯಾವುದೇ ಕಾರಣಕ್ಕೂ ಬರಿಗೈಯಿಂದ ಸ್ಪರ್ಶಿಸಬೇಡಿ.
