ರಾಜಧಾನಿ ಬೆಂಗಳೂರಿನಲ್ಲಿ ಬಿಡಿಎ (BDA) ರಸ್ತೆ ಕಾಮಗಾರಿಗಳ ಕಳಪೆ ಗುಣಮಟ್ಟ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ‘ಮೇಜರ್ ಆರ್ಟಿರಿಯಲ್ ರಸ್ತೆ’ (Major Arterial Road) ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದಿದೆ. ಕಡಬಗೆರೆ ಬಳಿಯ ರಸ್ತೆಯ ಮೇಲ್ಮೈ ಕುಸಿದಿದ್ದು, ಜಲ್ಲಿಕಲ್ಲುಗಳು ಮೇಲೆದ್ದು ಕಾಣುತ್ತಿವೆ. ವಾಹನಗಳ ಸಂಚಾರ ಆರಂಭವಾಗುವ ಮೊದಲೇ ಈ ದುಸ್ಥಿತಿ ತಲುಪಿರುವುದು ನಗರದ ನಾಗರಿಕ ಮೂಲಸೌಕರ್ಯಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜೂನ್ 27 ರಂದು ಉದ್ಘಾಟನೆಗೆ ಸಿದ್ಧವಾಗಿದ್ದ ರಸ್ತೆ
ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿಲೋಮೀಟರ್ ಉದ್ದದ ಈ ಪ್ರಮುಖ ರಸ್ತೆಯನ್ನು ಜೂನ್ 27 ರಂದು ಅದ್ಧೂರಿಯಾಗಿ ಉದ್ಘಾಟಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಉದ್ಘಾಟನೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗಲೇ, ಕಡಬಗೆರೆ ಸಮೀಪದ ಸುಮಾರು 20 ಮೀಟರ್‌ನಷ್ಟು ರಸ್ತೆಯ ಭಾಗವು ಸಂಪೂರ್ಣವಾಗಿ ಕುಸಿದಿದೆ. ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿಯ ದರ್ಶನವಾಗಿದೆ. ರಸ್ತೆ ಕುಸಿದಿರುವ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ತರಾತುರಿಯಲ್ಲಿ ದುರಸ್ತಿ ಕಾರ್ಯಕ್ಕೆ ಸಿಬ್ಬಂದಿಯನ್ನು ದೌಡಾಯಿಸಿ ತೇಪೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಮಸಿ
ವಿಶೇಷವೆಂದರೆ, ಬಿಡಿಎ ತನ್ನ ಸುವರ್ಣ ಮಹೋತ್ಸವದ (Golden Jubilee) ಆಚರಣೆಯ ಅಂಗವಾಗಿ ಈ ಮಹತ್ವಾಕಾಂಕ್ಷೆಯ ರಸ್ತೆಯನ್ನು ನಿರ್ಮಿಸಿತ್ತು. ಆದರೆ, ಈ ಸಂಭ್ರಮಾಚರಣೆಯ ಹೊಸ್ತಿಲಲ್ಲೇ ರಸ್ತೆ ಕುಸಿದುಬಿದ್ದಿರುವುದು ಪ್ರಾಧಿಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಉದ್ಘಾಟನೆಗೆ ಮುನ್ನವೇ ರಸ್ತೆ ಕುಸಿದಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ನೆಟ್ಟಿಗರು ಬಿಡಿಎ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಲೇವಡಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣದ ಗುಣಮಟ್ಟ, ಅಧಿಕಾರಿಗಳ ಹೊಣೆಗಾರಿಕೆ ಮತ್ತು ಭ್ರಷ್ಟಾಚಾರದ ಕುರಿತು ನಡೆಯುತ್ತಿರುವ ದೀರ್ಘಕಾಲಿಕ ಚರ್ಚೆಗೆ ಈ ಘಟನೆ ಮತ್ತಷ್ಟು ತುಪ್ಪ ಸುರಿದಿದೆ. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಬಲವಾಗಿ ಆಗ್ರಹಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಸಹ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.
https://x.com/BJP4Karnataka/status/2069638441986560143
