ತುಮಕೂರು: ಕ್ಷುಲ್ಲಕ ಕಾರಣಕ್ಕೆ ಅಮಾಯಕ ಯುವಕನ ಮೇಲೆ ಬಿಜೆಪಿ ಮುಖಂಡರೊಬ್ಬರು ತನ್ನ ಸಹಚರರೊಂದಿಗೆ ಸೇರಿ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ತಿಪಟೂರು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತವನ್ನು ಪ್ರಶ್ನಿಸಿದ್ದಕ್ಕೆ ದಲಿತ ಯುವಕನ ಮೇಲೆ ರಸ್ತೆಯಲ್ಲೇ ದೌರ್ಜನ್ಯ ಎಸಗಲಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆ:
ಬಳ್ಳಕಟ್ಟೆ ಗ್ರಾಮದ ಅಭಿಷೇಕ್ ಎಂಬ ಯುವಕ, ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾತನನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಅಭಿಷೇಕ್ ಆಂಬುಲೆನ್ಸ್‌ನ ಹಿಂದೆ ಬೈಕ್‌ನಲ್ಲಿ ಹೋಗುತ್ತಿದ್ದರು. ಸಿಗ್ನಲ್‌ನಲ್ಲಿ ನಿಂತಿದ್ದ ಅಭಿಷೇಕ್ ಬೈಕ್‌ಗೆ ಬಿಜೆಪಿ ಮುಖಂಡ, ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ಅವರ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಅಭಿಷೇಕ್ ಕಾಲಿಗೆ ಗಾಯವಾಗಿದೆ.
ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದಕ್ಕೆ ಸಿಟ್ಟಾದ ಪ್ರಸನ್ನ ಕುಮಾರ್ ಮತ್ತು ಅವರ ಸಹಚರರು, ಅಭಿಷೇಕ್ ಮೇಲೆ ಮುಗಿಬಿದ್ದಿದ್ದಾರೆ. ಯುವಕ ಕ್ಷಮೆ ಕೇಳಿ ಕಾಲು ಹಿಡಿದರೂ ಬಿಡದೆ ರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಅಭಿಷೇಕ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗಲೂ, ಪ್ರಸನ್ನ ಕುಮಾರ್ ತನ್ನ ಗ್ಯಾಂಗ್‌ನೊಂದಿಗೆ ಆಸ್ಪತ್ರೆಗೆ ನುಗ್ಗಿ ಅಲ್ಲಿಯೂ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಅಭಿಷೇಕ್ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ತಿಪಟೂರು ನಗರ ಠಾಣೆಯಲ್ಲಿ ಪ್ರಸನ್ನ ಕುಮಾರ್ ವಿರುದ್ಧ ಅಟ್ರಾಸಿಟಿ (ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ) ಪ್ರಕರಣ ದಾಖಲಾಗಿದೆ. ಆದರೆ, ಘಟನೆ ನಡೆದು 7 ದಿನಗಳಾದರೂ ಆರೋಪಿಗಳನ್ನು ಬಂಧಿಸದ ಕಾರಣ ದಲಿತ ಸಂಘಟನೆಗಳು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಬಂಧನಕ್ಕೆ ಆಗ್ರಹಿಸಿವೆ.
