ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನದ ಜ್ವಾಲೆ ಇದೀಗ ರಾಷ್ಟ್ರ ರಾಜಧಾನಿ ನವದೆಹಲಿ ತಲುಪಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಸಮರ ಸಾರಿರುವ ಬಿಜೆಪಿಯ ರೆಬೆಲ್ ನಾಯಕರು, ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ದೆಹಲಿಗೆ ದೌಡಾಯಿಸಿದ್ದು, ವರಿಷ್ಠರ ಅಂಗಳದಲ್ಲಿ ದೂರುಗಳ ಸರಮಾಲೆ ಇಟ್ಟಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ, ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ಹಾಗೂ ನಾಯಕತ್ವದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ. ಪ್ರಮುಖವಾಗಿ ವಿಜಯೇಂದ್ರ ಅವರ ಕಾರ್ಯವೈಖರಿ ಮತ್ತು ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಅಸಮಾಧಾನಿತ ಶಾಸಕರು ಉಸ್ತುವಾರಿಗಳ ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ವಿಜಯೇಂದ್ರ ನಾಯಕತ್ವವನ್ನು ಬದಲಾಯಿಸಬೇಕು ಅಥವಾ ಪಕ್ಷದಲ್ಲಿನ ಹಿರಿಯರಿಗೆ ಸೂಕ್ತ ಮನ್ನಣೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ರೆಬೆಲ್ಸ್ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯ ನಾಯಕರ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ನೇರವಾಗಿ ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಲು ಈ ತಂಡ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಈ ಬೆಳವಣಿಗೆ ರಾಜ್ಯ ಕಮಲ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
