S Shorts

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಶೆಡ್ಡಲ್ಲಿ ಸಿಕ್ತು ಕೋಟಿ ಕೋಟಿ ಹಣ..!

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಶೆಡ್ಡಲ್ಲಿ ಸಿಕ್ತು ಕೋಟಿ ಕೋಟಿ ಹಣ..!
Author: Meghana Gowda
Posted By: Meghana Gowda
Updated: Jun 27, 2026 | 12:17 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಗಳಿಲ್ಲದ ಕೋಟ್ಯಂತರ ರೂಪಾಯಿ ನಗದು ಹಣ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಕುರುಬರಹಳ್ಳಿಯ ಕೈಗಾರಿಕಾ ಶೆಡ್‌ ಒಂದರಲ್ಲಿ ರಹಸ್ಯವಾಗಿ ಬಚ್ಚಿಡಲಾಗಿದ್ದ ಬರೋಬ್ಬರಿ ₹2,98,00,900 (2.98 ಕೋಟಿ ರೂ.) ನಗದು ಹಣವನ್ನು ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ತಾವರೆಕೆರೆ ನಿವಾಸಿಯೊಬ್ಬರು ಈ ಬೃಹತ್ ಮೊತ್ತವನ್ನು ತನ್ನ ಸ್ನೇಹಿತನ ಶೆಡ್‌ನಲ್ಲಿ ಬಚ್ಚಿಟ್ಟಿದ್ದರು ಎಂದು ತಿಳಿದುಬಂದಿದೆ.

 ಜೂನ್ 2 ರಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಪಿಎಸ್‌ಐ ರಾಕೇಶ್ ಮತ್ತು ಸಿಬ್ಬಂದಿ ಎಂದಿನಂತೆ ರೌಂಡ್ಸ್ ಹಾಗೂ ಗಸ್ತು ತಿರುಗುತ್ತಿದ್ದರು. ಈ ವೇಳೆ ಕುರುಬರಹಳ್ಳಿಯ 11 ನೇ ಕ್ರಾಸ್‌ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಹೆಸರಿನ ಶೆಡ್‌ನಲ್ಲಿ ಭಾರಿ ಪ್ರಮಾಣದ ನಗದು ಹಣವನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡವು ಶೆಡ್‌ಗೆ ತೆರಳಿ ತಪಾಸಣೆ ನಡೆಸಿದಾಗ ನಾಲ್ಕು ದೊಡ್ಡ ಬ್ಯಾಗ್‌ಗಳಲ್ಲಿ ತುಂಬಿಟ್ಟಿದ್ದ ನೋಟುಗಳ ಕಂತೆಗಳು ಪತ್ತೆಯಾಗಿವೆ. ಪೊಲೀಸರು ಆ ಹಣವನ್ನು ಠಾಣೆಗೆ ತಂದು ಲೆಕ್ಕ ಹಾಕಿದಾಗ ಒಟ್ಟು 2.98 ಕೋಟಿ ರೂಪಾಯಿ ಇರುವುದು ದೃಢಪಟ್ಟಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಈ ನಗದು ಹಣವು ತಾವರೆಕೆರೆ ನಿವಾಸಿ ನಾಗರಾಜ್ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ನಾಗರಾಜ್ ಈ ಹಣವನ್ನು ಕುರುಬರಹಳ್ಳಿಯಲ್ಲಿರುವ ತನ್ನ ಸ್ನೇಹಿತ ವೆಂಕಟೇಶ್ ಎಂಬಾತನಿಗೆ ಸೇರಿದ ಶೆಡ್‌ನಲ್ಲಿ ತಂದಿಟ್ಟಿದ್ದರು. ಇಷ್ಟು ದೊಡ್ಡ ಮೊತ್ತದ ನಗದಿಗೆ ಯಾವುದೇ ಕಾನೂನಾತ್ಮಕ ದಾಖಲೆಗಳು ಇಲ್ಲದ ಕಾರಣ, ಪೊಲೀಸರು ತಕ್ಷಣವೇ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ.

ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, “ನಾವು ಚಿತ್ರದುರ್ಗದಲ್ಲಿದ್ದ ನಮ್ಮ ಸ್ವಂತ ಆಸ್ತಿಯನ್ನು ಮಾರಾಟ ಮಾಡಿ ಈ ಹಣವನ್ನು ತಂದಿದ್ದೇವೆ. ಬ್ಯಾಂಕಿನಲ್ಲಿರುವ ಸಾಲವನ್ನು ಚುಕ್ತಾ ಮಾಡಲು ಈ ನಗದನ್ನು ಇಟ್ಟುಕೊಂಡಿದ್ದೆವು” ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಹಣವನ್ನು ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು ಮತ್ತು ಪೊಲೀಸರು, ಆರೋಪಿಗಳ ಹೇಳಿಕೆ ನಿಜವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಹವಾಲಾ ಜಾಲವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.