S Shorts

Raichurನಲ್ಲಿ ಹರಿಯಿತು ರಕ್ತದೋಕುಳಿ: ತಾಯಿಯ ರಕ್ಷಣೆಗೆ ಬಂದ 12 ವರ್ಷದ ಬಾಲಕ ಬಲಿ!

Raichurನಲ್ಲಿ ಹರಿಯಿತು ರಕ್ತದೋಕುಳಿ: ತಾಯಿಯ ರಕ್ಷಣೆಗೆ ಬಂದ 12 ವರ್ಷದ ಬಾಲಕ ಬಲಿ!
Author: Meghana Gowda
Posted By: Meghana Gowda
Updated: Apr 29, 2026 | 1:22 PM

ರಾಯಚೂರು: “ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು” ಎಂಬ ಮಾತು ರಾಯಚೂರು ಜಿಲ್ಲೆಯಲ್ಲಿ ಅಕ್ಷರಶಃ ನಿಜವಾಗಿದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆಯ ಕಿಚ್ಚು ಪುಟ್ಟ ಬಾಲಕನ ಕೊಲೆಯಲ್ಲಿ ಅಂತ್ಯವಾಗಿದ್ದು, ಅಮ್ಮನ ಪ್ರಾಣ ಉಳಿಸಲು ಹೋದ ಮಗ ಚಿಕ್ಕಪ್ಪನ ಚಾಕು ಏಟಿಗೆ ಬಲಿಯಾಗಿರುವ ಘೋರ ಘಟನೆ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

ಬಲಿಯಾದ ಬಾಲಕ 12 ವರ್ಷದ ನಾಗರಾಜ್.  ಸಿದ್ದಪ್ಪ ಹಾಗೂ ಬಸವರಾಜ್ ಎಂಬ ಅಣ್ಣ-ತಮ್ಮಂದಿರ ನಡುವೆ ಪಿತ್ರಾರ್ಜಿತವಾಗಿ ಬಂದ 4 ಎಕರೆ ಕೃಷಿ ಭೂಮಿಯ ಹಂಚಿಕೆ ವಿಚಾರವಾಗಿ ದೀರ್ಘಕಾಲದ ವಿವಾದವಿತ್ತು. ಅಣ್ಣ ಸಿದ್ದಪ್ಪ ಮನೆಯಲ್ಲಿ ಇಲ್ಲದ ಸಮಯ ನೋಡಿ ತಮ್ಮ ಬಸವರಾಜ್ ಜಗಳಕ್ಕೆ ಬಂದಿದ್ದಾನೆ. ಅತ್ತಿಗೆ ಅಮೃತಾ ಜೊತೆ ಆಸ್ತಿ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಆಕ್ರೋಶಗೊಂಡ ಬಸವರಾಜ್ ಅತ್ತಿಗೆಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ.

ಈ ವೇಳೆ ತನ್ನ ತಾಯಿಯನ್ನು ರಕ್ಷಿಸಲು 12 ವರ್ಷದ ನಾಗರಾಜ್ ಅಡ್ಡ ಬಂದಿದ್ದಾನೆ. ಪೈಶಾಚಿಕವಾಗಿ ವರ್ತಿಸಿದ ಚಿಕ್ಕಪ್ಪ ಬಸವರಾಜ್, ಮಗನೆಂಬ ಮಮತೆಯೂ ಇಲ್ಲದೆ ಬಾಲಕನಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಅಮೃತಾಗೆ ಗಂಭೀರ ಗಾಯಗಳಾಗಿವೆ. ಸದ್ಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೃತ್ಯ ಎಸಗಿದ ಬಳಿಕ ಆರೋಪಿ ಬಸವರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ. ಕಣ್ಣೆದುರೇ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.