ಮಂಡ್ಯ: ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಆರೋಗ್ಯ ಇಲಾಖೆಯ ಆರ್‌ಸಿಎಚ್ (RCH) ಪೋರ್ಟಲ್ ನೀಡಿರುವ ಆಘಾತಕಾರಿ ಅಂಕಿಅಂಶಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 1,354 ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಇದು ಜಿಲ್ಲೆಯ ಸಾಮಾಜಿಕ ಆರೋಗ್ಯ ಹಾಗೂ ಭದ್ರತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯನ್ನು ಎತ್ತಿತೋರಿಸಿದೆ.
ವರದಿಯಾಗಿರುವ 1,354 ಪ್ರಕರಣಗಳ ಪೈಕಿ ಕೇವಲ 674 ಪ್ರಕರಣಗಳಲ್ಲಿ ಮಾತ್ರ ಪೋಕ್ಸೋ (POCSO) ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಅಂದರೆ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ದೂರು ದಾಖಲಾಗದಿರುವ ಕಹಿ ಸತ್ಯ ಬಯಲಾಗಿದೆ. ಬಾಲ್ಯ ವಿವಾಹ, ಪ್ರೀತಿಯ ಜಾಲ ಹಾಗೂ ಲೈಂಗಿಕ ದೌರ್ಜನ್ಯದಂತಹ ಕಾರಣಗಳಿಂದಾಗಿ 14 ರಿಂದ 18 ವರ್ಷದೊಳಗಿನ ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.
ಇತ್ತೀಚೆಗೆ ಕೆಆರ್ ಪೇಟೆಯ 2 ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗ ಮತ್ತಷ್ಟು ಆಘಾತಕಾರಿ ವಿಚಾರಗಳು ಹೊರಬಂದಿವೆ. ಈ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ 31 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಸ್ಕ್ಯಾನಿಂಗ್ ದಂಧೆಯ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದು ಸಾಬೀತಾಗಿದ್ದು, ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಈ ಹಿಂದೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಮಂಡ್ಯದ ಆಲೆಮನೆ, ಹೆಲ್ತ್ ಕ್ವಾರ್ಟರ್ಸ್, ತೋಟದ ಮನೆಗಳಲ್ಲಿ ಅವ್ಯಾಹತವಾಗಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ನಡೆದಿರುವುದು ರಾಜ್ಯಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ, ಹೆಣ್ಣು ಭ್ರೂಣ ಹತ್ಯೆಯ ಕಬಂಧಬಾಹು ಮೈಸೂರಿನವರೆಗೆ ವಿಸ್ತರಿಸಿರುವುದು ಗೊತ್ತಾಗಿತ್ತು. ಕೊನೆಯಲ್ಲಿ ಭಾರಿ ಕಾರ್ಯಾಚರಣೆ ನಡೆಸಿ ದಂಧೆಯ ಕಿಂಗ್‌ಪಿನ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಭ್ರೂಣ ಹತ್ಯೆಯ ಆಘಾತದಿಂದ ಜಿಲ್ಲೆ ಹೊರಬರುವ ಮುನ್ನವೇ, ಇದೀಗ ಮಂಡ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಮಿತಿಮೀರುತ್ತಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ.
