S Shorts

2 ತಿಂಗಳ ಕಂದಮ್ಮನ ಹೊಟ್ಟೆಯಲ್ಲಿ ಭ್ರೂಣ: BMCRC ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

2 ತಿಂಗಳ ಕಂದಮ್ಮನ ಹೊಟ್ಟೆಯಲ್ಲಿ ಭ್ರೂಣ: BMCRC ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
Author: Sagaradventure
Posted By: Sagaradventure
Updated: Oct 30, 2026 | 10:55 AM

ಬಳ್ಳಾರಿ: ವೈದ್ಯಕೀಯ ಲೋಕವೇ ಬೆರಗುಗೊಳ್ಳುವಂತಹ ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ, 2 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಬಳ್ಳಾರಿಯ ಬಿಎಂಸಿಆರ್‌ಸಿ (BMCRC) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಕಂದಮ್ಮನಿಗೆ ಮರುಜನ್ಮ ನೀಡಿದ್ದಾರೆ.

ಗರ್ಭದಲ್ಲಿದ್ದಾಗಲೇ ಪತ್ತೆಯಾಗಿದ್ದ ಸಮಸ್ಯೆ: 

ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಬಿಎಂಸಿಆರ್‌ಸಿಯ ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ ಅವರ ನೇತೃತ್ವದ ತಂಡವು ಈ ಅಪರೂಪದ ಸಮಸ್ಯೆಯನ್ನು ನಿಖರವಾಗಿ ಪತ್ತೆಹಚ್ಚಿತ್ತು. ಎರಡು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಜನಿಸಿದ್ದ ಈ ಮಗುವಿಗೆ ಅಗತ್ಯ ತಪಾಸಣೆಗಳನ್ನು ನಡೆಸಿ, ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಅತ್ಯಂತ ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರತೆಗೆಯಲಾಗಿದೆ.

ಈ ಸಂಕೀರ್ಣ ಕಾರ್ಯಾಚರಣೆಯಲ್ಲಿ ಡಾ. ಸಂಜೀವ್ ಜೋಶಿ, ಡಾ. ರಾಮ್ ಮೋಹನ್, ಡಾ. ಅಶ್ವಿತಾ ಹಾಗೂ ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಹ್ಮಣ್ಯ, ಡಾ. ಪರಿಮಳಾ, ಡಾ. ನಿಜಾಮುದ್ದೀನ್, ಡಾ. ರಘುನಾಥ್, ಡಾ. ಮಧುಶ್ರೀ ಸೇರಿದಂತೆ ಶುಶ್ರೂಷಕರಾದ ಪುಷ್ಪಲತಾ ಮತ್ತು ಸಲೀಂ ಪಾಷಾ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಏನಿದು ‘ಫೀಟಸ್ ಇನ್ ಫೀಟು’?: 

ವೈದ್ಯಕೀಯ ವಿಜ್ಞಾನದ ಪ್ರಕಾರ, ತಾಯಿಯ ಗರ್ಭದಲ್ಲಿ ಬೆಳವಣಿಗೆ ಹೊಂದದ ಅವಳಿ ಭ್ರೂಣವು, ಇನ್ನೊಂದು ಮಗುವಿನ ದೇಹದೊಳಗೆ ಸೇರಿಕೊಳ್ಳುವುದಕ್ಕೆ ‘ಫೀಟಸ್ ಇನ್ ಫೀಟು’ (Fetus in fetu) ಎಂದು ಕರೆಯಲಾಗುತ್ತದೆ. ಇದು 5 ಲಕ್ಷ ಜನನಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಕಂಡುಬರುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದೆ. ಸರಿಯಾದ ಸಮಯದಲ್ಲಿ ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ನಡೆಸಿದರೆ ಮಗುವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ಮಕ್ಕಳ ಸುಧಾರಿತ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದು, 2008ರಲ್ಲೂ ಇಂತಹುದೇ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಲಾಗಿತ್ತು. ಈ ಯಶಸ್ವಿ ಶಸ್ತ್ರಚಿಕಿತ್ಸೆಗೆ ಬೆಂಬಲ ನೀಡಿದ ಆಸ್ಪತ್ರೆಯ ಡೀನ್ ಡಾ. ಮರಿರಾಜ್, ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಸೇರಿದಂತೆ ಆಡಳಿತ ಮಂಡಳಿಗೆ ವೈದ್ಯರ ತಂಡ ಕೃತಜ್ಞತೆ ಸಲ್ಲಿಸಿದೆ.