S Shorts

Cabinet Meeting | ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ: ರೋಹಿತ್ ವೇಮುಲ ಕಾಯ್ದೆಗೆ ಸಿಗಲಿದೆಯೇ ಒಪ್ಪಿಗೆ?

Cabinet Meeting | ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ: ರೋಹಿತ್ ವೇಮುಲ ಕಾಯ್ದೆಗೆ ಸಿಗಲಿದೆಯೇ ಒಪ್ಪಿಗೆ?
Author: Meghana Gowda
Posted By: Meghana Gowda
Updated: Apr 16, 2026 | 11:59 AM

ಬೆಂಗಳೂರು: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಸಂಜೆ 4.30 ಕ್ಕೆ ವಿಧಾನಸೌಧದ ಕ್ಯಾಬಿನೆಟ್ (Cabinet) ಹಾಲ್‌ನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ, ಶೈಕ್ಷಣಿಕ ಕ್ಷೇತ್ರದಲ್ಲಿನ ಸುಧಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬಿಗ್ ಅಪ್ಡೇಟ್‌ಗಳು ಈ ಸಭೆಯಲ್ಲಿ ಹೊರಬೀಳುವ ಸಾಧ್ಯತೆಯಿದೆ.

ಸಂಪುಟ ಸಭೆಯ ಪ್ರಮುಖ ಅಜೆಂಡಾಗಳು:

1. ರೋಹಿತ್ ವೇಮುಲ ಕಾಯ್ದೆ ಜಾರಿ: ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಜಾತಿತಾರತಮ್ಯವನ್ನು ತಡೆಗಟ್ಟಲು ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ತರುವ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಈ ಬಿಲ್ ಜಾರಿಯಾದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನತೆ ಕಾಪಾಡಲು ಹೊಸ ಕಾನೂನು ಅಸ್ತಿತ್ವಕ್ಕೆ ಬರಲಿದೆ.

2. ಬೆಂಗಳೂರಿಗೆ 11 ಎಲಿವೇಟೆಡ್ ರಸ್ತೆಗಳು: ಜಿಬಿಎ (GBA) ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಒಟ್ಟು 75.60 ಕಿ.ಮೀ ಉದ್ದದ 11 ಎಲಿವೇಟೆಡ್ ರಸ್ತೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 13,262 ಕೋಟಿ ರೂ. ವೆಚ್ಚದ ಈ ಯೋಜನೆಗೆ ಇಂದು ಸಂಪುಟದ ಅನುಮೋದನೆ ಸಿಗುವ ನಿರೀಕ್ಷೆಯಿದೆ.

3. ರಾಮನಗರ ಬಳಿ ಉಪನಗರ (Satellite Town): ರಾಮನಗರದ ಬಳಿ ಸುಮಾರು 7,481 ಎಕರೆಯಲ್ಲಿ ಬೃಹತ್ ಉಪನಗರ ನಿರ್ಮಾಣ ಮಾಡುವ ಯೋಜನೆಯ ಬಗ್ಗೆ ಚರ್ಚೆಯಾಗಲಿದೆ. ಇದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಜಾರಿಯಾಗುವ ಸಾಧ್ಯತೆಯಿದೆ.

4. ಮೂಲಸೌಕರ್ಯ ಮತ್ತು ಪರಿಸರ:

  • ಬೈಯಪ್ಪನಹಳ್ಳಿ ಮೇಲ್ಸೇತುವೆ: ಬೈಯಪ್ಪನಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ 436.44 ಕೋಟಿ ವೆಚ್ಚದಲ್ಲಿ 2 ಪಥದ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ.

  • ಬಯೋಗ್ಯಾಸ್ ಉತ್ಪಾದನೆ: 85 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕೆಸರಿನಿಂದ ಅನಿಲ ಉತ್ಪಾದಿಸುವ ಯೋಜನೆಗೆ ಚಿಂತನೆ.

  • ಆಸ್ಪತ್ರೆ ನವೀಕರಣ: ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯ ನವೀಕರಣಕ್ಕೆ 14 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ಸಾಧ್ಯತೆ.

ಕಾಂಗ್ರೆಸ್ ಭವನಕ್ಕೆ ನಿವೇಶನ:

ಇಳಕಲ್, ಹುನಗುಂದ, ಯಲಬುರ್ಗಾ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ ನೀಡುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.