ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru ) ಜಿಲ್ಲೆಯ ಬಣಕಲ್‌ನಲ್ಲಿ ಮನುಷ್ಯನ ಕಣ್ಣಾಲಿಗಳು ಒದ್ದೆಯಾಗುವಂತಹ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ಮೃತಪಟ್ಟಿದ್ದ ಪತಿಯ ಶವದ ಜೊತೆಯಲ್ಲೇ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಹತ್ತು ದಿನಗಳ ಕಾಲ ಕಳೆದಿದ್ದು, ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಬಣಕಲ್ ನಿವಾಸಿ ಸಿಸಿಲ್ ಮೋನಿಸ್ ಮೃತಪಟ್ಟವರು. ಇವರ ಪತ್ನಿ ಮಾನಸಿಕ ಅಸ್ವಸ್ಥರಾಗಿದ್ದು, ಶವದ ಜೊತೆಯಲ್ಲೇ ಮನೆಯೊಳಗೆ ಇದ್ದರು. ಸಿಸಿಲ್ ಮೋನಿಸ್ ಅವರ ಪುತ್ರ ಕೆಲಸದ ನಿಮಿತ್ತ ಹೊರಗಿದ್ದು, ಇತ್ತೀಚೆಗಷ್ಟೇ ತಂದೆಗೆ ಚಿಕಿತ್ಸೆ ಕೊಡಿಸಿ ವೃತ್ತಿಗೆ ಮರಳಿದ್ದರು. ಮತ್ತೋರ್ವ ಪುತ್ರಿ ವಿದೇಶದಲ್ಲಿದ್ದಾರೆ. ಮಕ್ಕಳು ಪ್ರತಿದಿನ ಕರೆ ಮಾಡಿ ತಂದೆಯ ಆರೋಗ್ಯ ವಿಚಾರಿಸುತ್ತಿದ್ದರು. ಆದರೆ ಮಾನಸಿಕ ಅಸ್ವಸ್ಥರಾಗಿದ್ದ ತಾಯಿ, “ತಂದೆ ಆರೋಗ್ಯವಾಗಿದ್ದಾರೆ” ಎಂದೇ ಉತ್ತರಿಸುತ್ತಿದ್ದರು. ಇದರಿಂದ ಮಕ್ಕಳಿಗೆ ಯಾವುದೇ ಸಂಶಯ ಬಂದಿರಲಿಲ್ಲ.
ಸತತ ಹತ್ತು ದಿನಗಳ ಕಾಲ ತಂದೆಯ ಧ್ವನಿ ಕೇಳದಿದ್ದಾಗ ಪುತ್ರನಿಗೆ ಅನುಮಾನ ಕಾಡಿದೆ. ಕೂಡಲೇ ತನ್ನ ಸ್ನೇಹಿತನೊಬ್ಬನನ್ನು ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾನೆ. ಸ್ನೇಹಿತ ಮನೆಗೆ ಬಂದು ನೋಡಿದಾಗ ಸಿಸಿಲ್ ಮೋನಿಸ್ ಅವರ ಶವ ಕೊಳೆತ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಈ ಆಘಾತಕಾರಿ ದೃಶ್ಯ ಕಂಡು ಕೂಡಲೇ ಮಕ್ಕಳಿಗೂ ಮತ್ತು ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
