ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹವೊಂದು ಬೀದಿಗೆ ಬಂದಿದ್ದು, ಸ್ವಪಕ್ಷದ ಮುಖಂಡನ ವಿರುದ್ಧವೇ ಮಹಿಳಾ ನಾಯಕಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಷರೀಫ್ (Rahil Shariff) ಅವರ ಅಟ್ಟಹಾಸದ ವಿರುದ್ಧ ನ್ಯಾಯಕ್ಕಾಗಿ ನಾಯಕಿ ಚೇತನಾ (Chetana) ಇದೀಗ ದೆಹಲಿ ಮಟ್ಟದಲ್ಲಿ ಹೋರಾಟ ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆ :
ರಾಹಿಲ್ ಷರೀಫ್ ಅಪಾರ್ಟ್‌ಮೆಂಟ್ ಒಂದರಲ್ಲಿ ಮಹಿಳೆಯ ಜೊತೆಗಿದ್ದ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ಈ ಅಪಾರ್ಟ್‌ಮೆಂಟ್ ಚೇತನಾ ಅವರದ್ದಾಗಿದ್ದು, ರಾಹಿಲ್ ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಚೇತನಾ ಅವರೇ ತನ್ನ ಫೋಟೋ ವೈರಲ್ ಮಾಡಿದ್ದಾರೆ ಎಂದು ಆಕ್ರೋಶಗೊಂಡ ರಾಹಿಲ್ ಷರೀಫ್, ಅವರ ಮನೆಗೆ ತೆರಳಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚೇತನಾ ಅವರ ಪತಿಯ ಕೈಗೆ ಗಾಯಗಳಾಗಿದ್ದು, ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸ್ಥಳೀಯವಾಗಿ ದೂರು ನೀಡಿದರೂ ರಾಹಿಲ್ ಷರೀಫ್ ಪ್ರಭಾವ ಬಳಸಿ ರಕ್ಷಣೆ ಪಡೆಯುತ್ತಿದ್ದಾನೆ ಮತ್ತು ಯಾವುದೇ ಕಠಿಣ ಕ್ರಮವಾಗುತ್ತಿಲ್ಲ ಎಂದು ಚೇತನಾ ಆರೋಪಿಸಿದ್ದಾರೆ. ನ್ಯಾಯ ಸಿಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG&IGP) ಸೇರಿದಂತೆ ಹಲವು ಉನ್ನತ ಅಧಿಕಾರಿಗಳಿಗೆ, ರಾಹಿಲ್ ಷರೀಫ್ ಮೊಬೈಲ್‌ನಲ್ಲಿ ಅನೇಕ ಹಿಂದೂ ಹೆಣ್ಣುಮಕ್ಕಳ ಫೋಟೋಗಳಿದ್ದು, ಅವುಗಳನ್ನು ಇಟ್ಟುಕೊಂಡು ಆತ ಬ್ಲ್ಯಾಕ್‌ಮೇಲ್ ಮಾಡುತ್ತಾನೆ ಎಂದು ಚೇತನಾ ಗಂಭೀರವಾಗಿ ದೂರಿ ಪತ್ರ ಬರೆದಿದ್ದಾರೆ.
ಕಾಂಗ್ರೆಸ್‌ನಿಂದ ಉಚ್ಚಾಟನೆ:
ಈ ಎಲ್ಲಾ ವಿವಾದಗಳು ಮತ್ತು ಕ್ರಿಮಿನಲ್ ಹಿನ್ನೆಲೆಯ ಗಲಾಟೆಗಳ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವು ರಾಹಿಲ್ ಷರೀಫ್‌ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ತಿಂಗಳ ಅಂತರದಲ್ಲಿ ನಡೆದ ಎರಡು ಗಲಾಟೆಗಳಲ್ಲೂ ಈತ ಹಿಂದೂಗಳ ಮನೆಯಲ್ಲೇ ಗಲಾಟೆ ಮಾಡಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
