ಚಿಕ್ಕಮಗಳೂರು: ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳ ನಿರ್ವಹಣೆ ಹಾಗೂ ದುಸ್ಥಿತಿಗೆ ಕನ್ನಡಿ ಹಿಡಿಯುವಂತಹ ವಿಶಿಷ್ಟ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಬಸ್ಸಿನ ಮುರಿದು ಹೋಗಿದ್ದ ಸೀಟೊಂದಕ್ಕೆ ರೈತರೊಬ್ಬರು ತಮ್ಮ ಮೈಮೇಲಿದ್ದ ಟವೆಲ್ ಅನ್ನೇ ಬಿಗಿಯಾಗಿ ಕಟ್ಟಿ, ಸೀಟನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಮೂಲಕ ಸರ್ಕಾರದ ಕಳಪೆ ನಿರ್ವಹಣೆಯತ್ತ ಎಲ್ಲರ ಗಮನ ಸೆಳೆದಿದ್ದಾರೆ.
ಚಿಕ್ಕಮಗಳೂರು ಡಿಪೋಗೆ ಸೇರಿದ ಹಾಗೂ ಮೈಸೂರು ಮಾರ್ಗವಾಗಿ ಹಾಸನದ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಈ ಅವಸ್ಥೆ ಕಂಡುಬಂದಿದೆ. ಬಸ್ಸಿನ ಸೀಟೊಂದು ಸಂಪೂರ್ಣವಾಗಿ ಮುರಿದು ಹೋಗಿದ್ದು, ಅದರ ಮೇಲೆ ಯಾರೂ ಕೂಡ ಕುಳಿತುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ಸು ಚಲಿಸುವಾಗ ಆ ಮುರಿದ ಸೀಟು ಅಲುಗಾಡುತ್ತಿದ್ದರಿಂದ, ಎಲ್ಲಿ ಕೆಳಗೆ ಬೀಳುತ್ತೇವೆಯೋ ಎಂಬ ಭಯಕ್ಕೆ ಪ್ರಯಾಣಿಕರು ಆ ಸೀಟಿನಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದರು.
ಇದೇ ಬಸ್ ಹತ್ತಿದ ರೈತರೊಬ್ಬರು ಈ ಸೀಟಿನ ಅವಸ್ಥೆಯನ್ನು ಕಂಡು ಸುಮ್ಮನಾಗಲಿಲ್ಲ. ಕೂಡಲೇ ತಮ್ಮ ಹೆಗಲ ಮೇಲಿದ್ದ ಟವೆಲ್ ತೆಗೆದು, ಮುರಿದಿದ್ದ ಸೀಟನ್ನು ಪಕ್ಕದ ರಾಡ್‌ಗೆ ಭದ್ರವಾಗಿ ಕಟ್ಟಿದರು. ಆ ಮೂಲಕ ಸೀಟು ಅಲುಗಾಡದಂತೆ ಭದ್ರಪಡಿಸಿ ತಾವೇ ಅಲ್ಲಿ ಕುಳಿತು ಆರಾಮಾಗಿ ಪ್ರಯಾಣ ಬೆಳೆಸಿದರು. ವಿಶೇಷವೆಂದರೆ, ತಾವು ಬಸ್ ಇಳಿಯುವಾಗಲೂ ಆ ಟವೆಲ್ ಅನ್ನು ಬಿಚ್ಚದೆ, “ನಂತರ ಬರುವ ಇತರ ಪ್ರಯಾಣಿಕರಿಗೂ ಅನುಕೂಲವಾಗಲಿ, ಇದು ಸರ್ಕಾರಕ್ಕೆ ನನ್ನ ಕಡೆಯಿಂದ ಗಿಫ್ಟ್ ಇರಲಿ” ಎನ್ನುವಂತೆ ಆ ಟವೆಲ್ ಅನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಎಲ್ಲರ ಗಮನ ಸೆಳೆದಿದೆ.
ರೈತನ ಈ ಸಮಯಪ್ರಜ್ಞೆಯನ್ನು ಮೆಚ್ಚಿದ ಸಹ ಪ್ರಯಾಣಿಕರು, ಇದೇ ವೇಳೆ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಸರ್ಕಾರವೇನೋ ಉಚಿತ ಪ್ರಯಾಣದ ಯೋಜನೆಗಳನ್ನು ಜಾರಿ ಮಾಡಿದೆ, ಆದರೆ ಬಸ್ಸುಗಳ ಸ್ಥಿತಿ ಮಾತ್ರ ಸಂಪೂರ್ಣವಾಗಿ ಅಯೋಮಯವಾಗಿದೆ. ಸೀಟುಗಳೇ ಈ ರೇಂಜಿಗೆ ಕಿತ್ತುಬಂದಿದ್ದರೆ, ಇನ್ನು ಬಸ್ಸಿನ ಇಂಜಿನ್ ಕಥೆ ಏನಾಗಿರಬೇಡ? ಬಸ್ಸು ದಾರಿ ಮಧ್ಯೆ ಕೆಟ್ಟು ನಿಲ್ಲದಿದ್ದರೆ ಅಷ್ಟೇ ಸಾಕಪ್ಪಾ” ಎಂದು ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
