S Shorts

ರೀಲ್ಸ್‌ಗಾಗಿ 3000 ಅಡಿ ಪ್ರಪಾತದ ಅಂಚಿನಲ್ಲಿ ಪ್ರವಾಸಿಗರ ಸ್ಟಂಟ್; Thar ಕಾರು ಸೀಜ್!

ರೀಲ್ಸ್‌ಗಾಗಿ 3000 ಅಡಿ ಪ್ರಪಾತದ ಅಂಚಿನಲ್ಲಿ ಪ್ರವಾಸಿಗರ ಸ್ಟಂಟ್; Thar ಕಾರು ಸೀಜ್!
Author: Sagaradventure
Posted By: Sagaradventure
Updated: Aug 20, 2026 | 11:47 AM

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿ ಝರಿಯಲ್ಲಿ ಪ್ರವಾಸಿಗರು ರೀಲ್ಸ್ ಮಾಡುವ ಹುಚ್ಚಿನಲ್ಲಿ ಪ್ರಾಣದ ಜೊತೆ ಚೆಲ್ಲಾಟವಾಡಿದ ಆಘಾತಕಾರಿ ಘಟನೆ ನಡೆದಿದೆ. ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಣಿ ಝರಿ ವ್ಯೂ ಪಾಯಿಂಟ್‌ನಲ್ಲಿ ಬರೋಬ್ಬರಿ 3000 ಅಡಿ ಆಳದ ಪ್ರಪಾತದ ತುದಿಗೆ ಕಾರನ್ನು ತಂದು ನಿಲ್ಲಿಸುವ ಮೂಲಕ ಬೆಂಗಳೂರು ಮೂಲದ ಪ್ರವಾಸಿಗರು ಡೇರ್ ಡೆವಿಲ್ ಸ್ಟಂಟ್ ಮಾಡಿದ್ದಾರೆ.

ಪ್ರಪಾತದ ಬಾಯಿಗೆ ಬಂದು ನಿಂತಿದ್ದ ಥಾರ್ ಕಾರನ್ನು ನೋಡಿ ಬೆಚ್ಚಿಬಿದ್ದ ಸ್ಥಳೀಯರು, ಪ್ರವಾಸಿಗರ ಈ ಅತಿರೇಕದ ಹುಚ್ಚಾಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಳಸ ವಲಯ ಅರಣ್ಯ ಅಧಿಕಾರಿಗಳು, ಅರಣ್ಯ ಕಾಯ್ದೆ ಉಲ್ಲಂಘನೆ ಮತ್ತು ಅಪಾಯಕಾರಿ ವರ್ತನೆಯ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಪ್ರಪಾತದ ಅಂಚಿನಲ್ಲಿ ನಿಲ್ಲಿಸಿದ್ದ KA 01 MX 2647 ನೋಂದಣಿ ಸಂಖ್ಯೆಯ ಥಾರ್ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದು ಸೀಜ್ ಮಾಡಿದ್ದು, ಪ್ರವಾಸಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರವಾಸವೆಂದರೆ ಹುಚ್ಚಾಟವಲ್ಲ, ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಈ ರೀತಿ ರೀಲ್ಸ್‌ಗಾಗಿ ಪ್ರಾಣದ ಜೊತೆ ಚೆಲ್ಲಾಟವಾಡುವುದು ಹಾಗೂ ನಿಯಮಗಳನ್ನು ಉಲ್ಲಂಘಿಸುವುದು ಅಕ್ಷಮ್ಯ ಅಪರಾಧ ಎಂದು ಅರಣ್ಯ ಅಧಿಕಾರಿಗಳು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.