S Shorts

ಮಳೆ ಬಂದರೆ ಆಫೀಸ್‌ಗೆ ಬರುವಂತಿಲ್ಲ! ಉದ್ಯೋಗಿಗೆ 7 ದಿನ ರಜೆ ನೀಡಿ, ಕೈತುಂಬಾ ಹಣವನ್ನೂ ಕೊಟ್ಟ ಬಾಸ್!

ಮಳೆ ಬಂದರೆ ಆಫೀಸ್‌ಗೆ ಬರುವಂತಿಲ್ಲ! ಉದ್ಯೋಗಿಗೆ 7 ದಿನ ರಜೆ ನೀಡಿ, ಕೈತುಂಬಾ ಹಣವನ್ನೂ ಕೊಟ್ಟ ಬಾಸ್!
Author: Savina Naik
Posted By: Savina Naik
Updated: Apr 22, 2026 | 3:16 PM

ಬೀಜಿಂಗ್: ಸಾಮಾನ್ಯವಾಗಿ ಕಂಪನಿಗಳಲ್ಲಿ ರಜೆ ಕೇಳಿದರೆ ಬಾಸ್‌ಗಳು ಮುಖ ಸಿಂಡರಿಸುವುದು ನಮಗೆಲ್ಲಾ ಗೊತ್ತು. ಆದರೆ ಚೀನಾದಲ್ಲಿ ನಡೆದ ಈ ಘಟನೆ ಈಗ ವಿಶ್ವದಾದ್ಯಂತ ಉದ್ಯೋಗಿಗಳ ಹೊಟ್ಟೆ ಉರಿಯುವಂತೆ ಮಾಡಿದೆ.

ಮಳೆ ಬರುತ್ತಿದೆ ಎಂಬ ಕಾರಣಕ್ಕೆ ತನ್ನ ಉದ್ಯೋಗಿಗೆ ಬರೋಬ್ಬರಿ 7 ದಿನಗಳ ಕಾಲ ‘ಪೇಯ್ಡ್ ರಜೆ’ (ಸಂಬಳ ಸಹಿತ ರಜೆ) ನೀಡಿರುವ ಚೀನಾದ ಮಲಾ ವಾಂಗ್ಜಿ ಸ್ನ್ಯಾಕ್ ಕಂಪನಿ ಬಾಸ್ ಸುದ್ದಿಯಾಗಿದ್ದಾರೆ. ಇದನ್ನು ನೋಡಿದ ಅನೇಕರ ಬೆಂಗಳೂರಿಗೂ ಬಿಸಿಲು ಜಾಸ್ತಿ ಇದ್ರೆ ರಜೆ ನೀಡಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಚೀನಾದ ಶಾಂಘೈ ಮೂಲದ ಉದ್ಯೋಗಿಯೊಬ್ಬರು ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಕೆಲಸಕ್ಕೆ ಬರಲು ಕಷ್ಟಪಡುತ್ತಿದ್ದರು. ಇದನ್ನು ಗಮನಿಸಿದ ಕಂಪನಿಯ ಮಾಲೀಕರು, ಕೇವಲ ರಜೆ ಮಾತ್ರ ನೀಡದೆ ಉದ್ಯೋಗಿಯ ಮನಸ್ಸಿಗೆ ನೆಮ್ಮದಿ ನೀಡುವಂತಹ ಆಫರ್ ನೀಡಿದ್ದಾರೆ.

ಮಳೆ ನಿಂತು ವಾತಾವರಣ ತಿಳಿಯಾಗುವವರೆಗೂ ಮನೆಯಲ್ಲೇ ವಿಶ್ರಾಂತಿ ಪಡೆಯಲು 7 ದಿನಗಳ ರಜೆ ಮಂಜೂರು ಮಾಡಿದ್ದಾರೆ.ರಜೆಯ ಅವಧಿಯಲ್ಲಿ ಹೊರಗಿನಿಂದ ಆಹಾರ ಆರ್ಡರ್ ಮಾಡಲು ಅಥವಾ ಇತರೆ ತುರ್ತು ಅಗತ್ಯಗಳಿಗಾಗಿ ಉದ್ಯೋಗಿಗೆ ನಗದು ರೂಪದಲ್ಲಿ ಹಣಕಾಸಿನ ನೆರವು ನೀಡಿದ್ದಾರೆ. ಈ ರಜೆಯು ಸಂಬಳ ಸಹಿತ ರಜೆಯಾಗಿದ್ದು, ಉದ್ಯೋಗಿಯ ಮಾಸಿಕ ಆದಾಯದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ಬಾಸ್ ಭರವಸೆ ನೀಡಿದ್ದಾರೆ.

ಈ ವಿಷಯವನ್ನು ಉದ್ಯೋಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬೆನ್ನಲ್ಲೇ, ನೆಟ್ಟಿಗರು “ನಮಗೂ ಇಂತಹ ಬಾಸ್ ಸಿಗಬಾರದೇ?” ಎಂದು ಕಮೆಂಟ್ ಮಾಡುತ್ತಿದ್ದಾರೆ. ಚೀನಾದ ಇತರೆ ಉದ್ಯೋಗಿಗಳು ಈ ಕಂಪನಿಯ ಮಾಲೀಕನ ಉದಾರತೆಯನ್ನು ಕೊಂಡಾಡುತ್ತಿದ್ದಾರೆ. ಕೆಲಸದ ಒತ್ತಡದ ನಡುವೆ ಉದ್ಯೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಇಂತಹ ಬಾಸ್‌ಗಳು ನಿಜಕ್ಕೂ ಅಪರೂಪ ಎಂದು ಚರ್ಚೆಯಾಗುತ್ತಿದೆ.