ಬೀಜಿಂಗ್: ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಫಿಲ್ಟರ್‌ಗಳು ಸಾಮಾನ್ಯ ಮುಖವನ್ನೂ ಅಪ್ಸರೆಯಂತೆ ಮಾರ್ಪಡಿಸಬಲ್ಲವು. ಆದರೆ, ಇದೇ ಫಿಲ್ಟರ್ ಚೀನಾದ ಖ್ಯಾತ ಇನ್‌ಫ್ಲುವೆನ್ಸರ್ ಒಬ್ಬಳಿಗೆ ಅನಿರೀಕ್ಷಿತ ಸಂಕಷ್ಟ ತಂದೊಡ್ಡಿದೆ. ಲೈವ್ ಸ್ಟ್ರೀಮಿಂಗ್ ವೇಳೆ ತಾಂತ್ರಿಕ ದೋಷದಿಂದ ಫಿಲ್ಟರ್ ಕೈಕೊಟ್ಟ ಪರಿಣಾಮ, ಆಕೆಯ ಅಸಲಿ ರೂಪ ಜಗತ್ತಿಗೆ ಗೋಚರಿಸಿದ್ದು, ಕೇವಲ ಕೆಲವೇ ಗಂಟೆಗಳಲ್ಲಿ 1.4 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳು ಆಕೆಯನ್ನು ಅನ್‌ಫಾಲೋ ಮಾಡಿದ್ದಾರೆ!
ಲೈವ್‌ನಲ್ಲಿ ನಡೆದಿದ್ದೇನು? ಸಾವಿರಾರು ಅಭಿಮಾನಿಗಳೊಂದಿಗೆ ಲೈವ್ ಚಾಟ್ ಮಾಡುತ್ತಿದ್ದ ಆ ಇನ್‌ಫ್ಲುವೆನ್ಸರ್, ಬ್ಯೂಟಿ ಫಿಲ್ಟರ್ ಬಳಸಿ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ, ಪ್ರಸಾರದ ಮಧ್ಯೆ ಅಚಾನಕ್ಕಾಗಿ ಫಿಲ್ಟರ್ ಸಾಫ್ಟ್‌ವೇರ್ ಸ್ಥಗಿತಗೊಂಡಿದೆ. ಈ ವೇಳೆ ಸ್ಕ್ರೀನ್ ಮೇಲೆ ಕಂಡ ಆಕೆಯ ನೈಜ ಮುಖ ಮತ್ತು ಫಿಲ್ಟರ್ ಸೌಂದರ್ಯಕ್ಕೆ ಅಜಗಜಾಂತರ ವ್ಯತ್ಯಾಸವಿತ್ತು. ಇದನ್ನು ಕಂಡ ವೀಕ್ಷಕರು ಕ್ಷಣಕಾಲ ದಿಗಿಲುಗೊಂಡಿದ್ದಾರೆ.
ಫಾಲೋವರ್ಸ್ ಸಾಮೂಹಿಕ ಪಲಾಯನ: ಈ ಘಟನೆ ವೈರಲ್ ಆಗುತ್ತಿದ್ದಂತೆಯೇ ಆಕೆಯ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಕುಸಿಯತೊಡಗಿದೆ. “ನಾವು ಇಷ್ಟು ದಿನ ಆರಾಧಿಸಿದ್ದು ಕೇವಲ ಸಾಫ್ಟ್‌ವೇರ್ ಸೃಷ್ಟಿಸಿದ ಸುಳ್ಳನ್ನೇ?” ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು ಸಾಮೂಹಿಕವಾಗಿ ಅನ್‌ಫಾಲೋ ಮಾಡಿದ್ದಾರೆ. ಸುಮಾರು 1,40,000 ಫಾಲೋವರ್ಸ್ ತನ್ನ ಕೈಬಿಟ್ಟಿದ್ದಾರೆ ಎಂದು ಆಕೆ ಸ್ವತಃ ಅಳಲು ತೋಡಿಕೊಂಡಿದ್ದಾಳೆ.
ನೈಜತೆ ವರ್ಸಸ್ ಫಿಲ್ಟರ್ ಚರ್ಚೆ: ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ‘ನೈಜತೆ’ (Authenticity) ಮತ್ತು ‘ಕೃತಕ ಸೌಂದರ್ಯ’ದ ಕುರಿತು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಲೈಕ್ ಮತ್ತು ಫಾಲೋವರ್ಸ್‌ಗಳಿಗಾಗಿ ಯುವಜನತೆ ಫಿಲ್ಟರ್‌ಗಳ ಮೊರೆ ಹೋಗುತ್ತಿರುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಈ ಚೀನೀಸ್ ಸುಂದರಿಯ ‘ಫಿಲ್ಟರ್ ಫೇಲ್’ ಕಥೆ ಈಗ ಇಡೀ ವಿಶ್ವದಾದ್ಯಂತ ಟ್ರೆಂಡಿಂಗ್ ಆಗಿದೆ.
