ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ದುನಿಯಾ ವಿಜಯ್ ಪುತ್ರಿ ಮೋನಿಷಾ ಹಾಗೂ ನಟ ವಿನಯ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಸೆಪ್ಟೆಂಬರ್ 18ರಂದು ತೆರೆಕಾಣಲಿದೆ.
ಟ್ರೇಲರ್ ನೋಡಿದರೆ ಇದು ಪಕ್ಕಾ ದುನಿಯಾ ವಿಜಯ್ ಶೈಲಿಯ ಮಾಸ್, ರಕ್ತ ಹಾಗೂ ಕ್ರೈಮ್ ಕಥಾಹಂದರದ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ಇದೇ ಮೊದಲ ಬಾರಿಗೆ ವಿನಯ್ ರಾಜ್‌ಕುಮಾರ್ ಅವರು ಲಾಂಗ್ ಹಿಡಿದು ಮಾಸ್ ಅವತಾರದಲ್ಲಿ ಅಬ್ಬರಿಸಿದ್ದು, ಈ ಸಿನಿಮಾ ಮೂಲಕ ಅವರಿಗೆ ‘ಸ್ಯಾಂಡಲ್ ಮಯೂರ’ ಎನ್ನುವ ಹೊಸ ಬಿರುದು ನೀಡಲಾಗಿದೆ.
ಭೂಗತ ಲೋಕದ ಕಥೆಗೆ ಮನಸೋತ ಶಿವಣ್ಣ ದಂಪತಿ
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜ್‌ಕುಮಾರ್, ಭೂಗತ ಜಗತ್ತಿನ ಸಿನಿಮಾ ಎಂದರೆ ಮೊದಲು ಶಿವಣ್ಣ ನೆನಪಾಗುತ್ತಾರೆ, ಇನ್ಮುಂದೆ ಶಿವಣ್ಣನ ಜೊತೆಗೆ ವಿನಯ್ ಕೂಡ ನೆನಪಾಗುತ್ತಾನೆ ಎಂದು ಪ್ರಶಂಸಿದರು. ತಮ್ಮನ ಮಗ ಎಂಬ ಕಾರಣಕ್ಕೆ ಬೆಂಬಲಿಸುತ್ತಿಲ್ಲ, ಅವನಲ್ಲಿರುವ ಪ್ರತಿಭೆಗಾಗಿ ಈ ಸಿನಿಮಾಗೆ ಕಾಯುತ್ತಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಗೀತಾ ಶಿವರಾಜ್‌ಕುಮಾರ್ ಅವರು ಟ್ರೇಲರ್ ನೋಡಿದಾಗ ತಮಗೆ ಸೂಪರ್ ಹಿಟ್ ‘ಓಂ’ ಸಿನಿಮಾದ ನೆನಪಾಯಿತು ಎಂದು ಮೆಚ್ಚುಗೆ ಸೂಚಿಸಿದರು. ನಿರ್ದೇಶಕರು ಹಾಗೂ ತಂದೆ ವಿಜಯ್ ಅವರು ತಮ್ಮನ್ನು ನಂಬಿ ಕೊಟ್ಟಿರುವ ಈ ಪಾತ್ರವನ್ನು ಪ್ರೇಕ್ಷಕರು ಪ್ರೀತಿಯಿಂದ ಸ್ವೀಕರಿಸಬೇಕು ಎಂದು ನಾಯಕಿ ಮೋನಿಷಾ ಮನವಿ ಮಾಡಿದರು. ವಿನಯ್ ರಾಜ್‌ಕುಮಾರ್ ಮಾತನಾಡಿ, ಈ ಸಿನಿಮಾ ಮಾಡಿದ ಬಳಿಕ ಬೆಂಗಳೂರಿನಲ್ಲಿ ಕಷ್ಟಪಟ್ಟು ಬದುಕುತ್ತಿರುವ ಪ್ರತಿಯೊಬ್ಬರ ಮೇಲೂ ತಮಗೆ ಗೌರವ ಹೆಚ್ಚಾಗಿದೆ ಎಂದರು.
ಬಣ್ಣ ಹಚ್ಚಿದ ಉಮಾಶ್ರೀ ಹಾಗೂ ತಾಂತ್ರಿಕ ವರ್ಗದ ಸಾಥ್
ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿರುವ ಹಿರಿಯ ನಟಿ ಉಮಾಶ್ರೀ ಅವರು ದುನಿಯಾ ವಿಜಯ್ ಅವರ ಆಸೆಯ ಮೇರೆಗೆ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಯಾನಗರಿ ಬೆಂಗಳೂರಿಗೆ ಬದುಕನ್ನು ಅರಸಿ ಬರುವ ಯುವಜನತೆಯ ಸ್ಥಿತಿಯನ್ನು ವಿಜಯ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಉಮಾಶ್ರೀ ಶ್ಲಾಘಿಸಿದರು. ಜೊತೆಗೆ ವಿನಯ್ ಅವರ ವಿನಯಶೀಲತೆ ಹಾಗೂ ಅದ್ಭುತ ನಟನೆಯನ್ನು ಮುಕ್ತಕಂಠದಿಂದ ಹೊಗಳಿದರು.
ಖ್ಯಾತ ಸಂಭಾಷಣೆಕಾರ ಮಾಸ್ತಿ ಹಾಗೂ ಶಿವಣ್ಣನ ಅಭಿಮಾನಿ ಪುನೀತ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಸಿಟಿ ಲೈಟ್ಸ್’ ಚಿತ್ರಕ್ಕೆ ಚರಣ್ ರಾಜ್ ಅವರ ಅದ್ಭುತ ಸಂಗೀತವಿದ್ದು, ಶಿವಸೇನಾ ಅವರ ಛಾಯಾಗ್ರಹಣ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
