S Shorts

‘ಗೋಲ್ಡನ್ ಚಾರಿಯಟ್’ ಮರುಚಾಲನೆ: ಜನಸಾಮಾನ್ಯರಿಗೂ ಸಿಗಲಿ ಐಷಾರಾಮಿ ರೈಲು ಪ್ರಯಾಣದ ಅವಕಾಶ ಎಂದ CM ಡಿಕೆಶಿ

‘ಗೋಲ್ಡನ್ ಚಾರಿಯಟ್’ ಮರುಚಾಲನೆ: ಜನಸಾಮಾನ್ಯರಿಗೂ ಸಿಗಲಿ ಐಷಾರಾಮಿ ರೈಲು ಪ್ರಯಾಣದ ಅವಕಾಶ ಎಂದ CM ಡಿಕೆಶಿ
Author: Sagaradventure
Posted By: Sagaradventure
Updated: Oct 24, 2026 | 3:27 PM

ಬೆಂಗಳೂರು: ರಾಜ್ಯದ ನೈಸರ್ಗಿಕ ಹಾಗೂ ಪಾರಂಪರಿಕ ತಾಣಗಳನ್ನು ದೇಶ-ವಿದೇಶಗಳಿಗೆ ಪರಿಚಯಿಸಲು ಮತ್ತು ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಪ್ರತಿಷ್ಠಿತ ಐಷಾರಾಮಿ ರೈಲು ‘ಗೋಲ್ಡನ್ ಚಾರಿಯಟ್’ಗೆ (Golden Chariot) ರಾಜ್ಯ ಸರ್ಕಾರ ಮರುಚಾಲನೆ ನೀಡಿದೆ. ಶನಿವಾರ ಮೆಜೆಸ್ಟಿಕ್ ಹಾಗೂ ಕೆಂಗೇರಿ ರೈಲು ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ಪ್ರವಾಸಿ ಮಾರ್ಗಗಳ ಪರಿಚಯ: 

ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮುಂದಾಳತ್ವದಲ್ಲಿ, ಐಆರ್‌ಸಿಟಿಸಿ (IRCTC) ಹಾಗೂ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಗೆ ಹೊಸ ರೂಪ ನೀಡಲಾಗಿದೆ. ದಕ್ಷಿಣ ಭಾರತದ ಪ್ರಮುಖ ತಾಣಗಳಾದ ಹಂಪಿ, ಮಹಾಬಲಿಪುರಂ, ಮೈಸೂರು, ಬೆಂಗಳೂರು, ಕೊಚ್ಚಿನ್, ಚೆಟ್ಟಿನಾಡು ಸಂಪರ್ಕಿಸುವ ‘ಜ್ಯೂಯಲ್ಸ್ ಆಫ್ ಸೌತ್’ ಹಾಗೂ 4 ದಿನಗಳ ‘ಡ್ರೀಮ್ಸ್ ಆಫ್ ಕರ್ನಾಟಕ’ ಎಂಬ ವಿಶೇಷ ಪ್ರವಾಸಿ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ 75 ಮಂದಿ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ.

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಐಷಾರಾಮಿ ಪ್ರಯಾಣ: 

ಈ ರೈಲಿನಲ್ಲಿ 80 ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಎರಡು ರೆಸ್ಟೋರೆಂಟ್‌ಗಳು, 60 ಸಿಬ್ಬಂದಿ, ಸ್ಪಾ, ಜಿಮ್ ಸೇರಿ ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳಿವೆ. “ಐಷಾರಾಮಿ ರೈಲು ಪ್ರಯಾಣ ಕೇವಲ ಶ್ರೀಮಂತರಿಗೆ ಮತ್ತು ಹೊರರಾಜ್ಯದವರಿಗೆ ಮಾತ್ರ ಸೀಮಿತವಾಗಬಾರದು. ಆಫ್-ಸೀಸನ್‌ನಲ್ಲಿ ಕಡಿಮೆ ದರ ನಿಗದಿಪಡಿಸುವ ಮೂಲಕ ರಾಜ್ಯದ ಸಾಮಾನ್ಯ ಪ್ರವಾಸಿಗರಿಗೂ ಈ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ” ಎಂದು ಸಿಎಂ ತಿಳಿಸಿದ್ದಾರೆ.

ಸೌದಿ ಅರೇಬಿಯಾ ಬಿಕ್ಕಟ್ಟು – ಕನ್ನಡಿಗರಿಗೆ ಸಹಾಯವಾಣಿ: 

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಸಿಲುಕಿರುವ ಕನ್ನಡಿಗರ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಕನ್ನಡಿಗರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಗತ್ಯ ಬಿದ್ದರೆ ವಿಮಾನ ಸಂಪರ್ಕ ಭದ್ರತೆ ಒದಗಿಸುವಂತೆ ಕೋರಲಾಗಿದೆ. ಕನ್ನಡಿಗರಿಗಾಗಿ ವಿಶೇಷ ಸಹಾಯವಾಣಿ ತೆರೆಯಲಾಗಿದ್ದು, ಅಲ್ಪಸಂಖ್ಯಾತ ಇಲಾಖೆ ಹಾಗೂ ರಾಜ್ಯ ಸರ್ಕಾರ ನಿಮ್ಮೊಂದಿಗಿದೆ, ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ಅಭಯ ನೀಡಿದರು.