S Shorts

ಸೇಫ್ ಫುಟ್‌ಪಾತ್ ಅಭಿಯಾನ: ಅಂದು ಸಭೆಯಲ್ಲಿ ಒಪ್ಪಿ ಇಂದು ಬೀದಿಯಲ್ಲಿ ನಾಟಕವಾಡುತ್ತಿರುವ BJP ವಿರುದ್ಧ CM ಡಿಕೆ ಶಿವಕುಮಾರ್ ವಾಗ್ದಾಳಿ

ಸೇಫ್ ಫುಟ್‌ಪಾತ್ ಅಭಿಯಾನ: ಅಂದು ಸಭೆಯಲ್ಲಿ ಒಪ್ಪಿ ಇಂದು ಬೀದಿಯಲ್ಲಿ ನಾಟಕವಾಡುತ್ತಿರುವ BJP ವಿರುದ್ಧ CM ಡಿಕೆ ಶಿವಕುಮಾರ್ ವಾಗ್ದಾಳಿ
Author: Sagaradventure
Posted By: Sagaradventure
Updated: Jul 3, 2026 | 5:06 PM

ಬೆಂಗಳೂರಿನಲ್ಲಿ ಪಾದಾಚಾರಿ ಮಾರ್ಗಗಳನ್ನು (Footpath) ಮುಕ್ತಗೊಳಿಸಲು ಆರಂಭಿಸಿರುವ ‘ಸೇಫ್ ಫುಟ್‌ಪಾತ್ ಅಭಿಯಾನ’ (Safe Footpath Campaign) ಇದೀಗ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಅಭಿಯಾನವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳ ತೆರವು ವಿಚಾರದಲ್ಲಿ ಅಂದು ಸಭೆಯಲ್ಲಿ ಒಮ್ಮತದ ಒಪ್ಪಿಗೆ ಸೂಚಿಸಿ, ಇಂದು ಬೀದಿಯಲ್ಲಿ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾರ್ಚ್ ತಿಂಗಳ ಸಭೆಯ ಫೋಟೋಗಳು ಮತ್ತು ದಾಖಲೆಗಳನ್ನು ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಸರ್ಕಾರದ ಈ ಕ್ರಮವು ಪಾದಾಚಾರಿಗಳ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ನೊಂದಾಯಿತ ಬೀದಿಬದಿ ವ್ಯಾಪಾರಿಗಳ ಹಿತ ಕಾಯುವ ಉದ್ದೇಶವನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಧಾರ

ಕಳೆದ ಮಾರ್ಚ್‌ 20, 2026 ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರಿನ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಜನಪ್ರತಿನಿಧಿಗಳು ಹಾಜರಿದ್ದರು. ಆ ಸಭೆಯಲ್ಲಿಯೇ ಬೀದಿಬದಿ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ನೂತನ ನಿಯಮಗಳನ್ನು ಜಾರಿಗೆ ತರಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿತ್ತು. ಅಂದು ಸಭೆಯಲ್ಲಿದ್ದ ಬಿಜೆಪಿ ಸೇರಿದಂತೆ ಎಲ್ಲಾ ಶಾಸಕರು ಮತ್ತು ಸಚಿವರು ಒಮ್ಮತದಿಂದ ಈ ಕೆಳಗಿನ ನಿಯಮಗಳಿಗೆ ಒಪ್ಪಿಗೆ ಸೂಚಿಸಿದ್ದರು ಎಂದು ಡಿ.ಕೆ. ಶಿವಕುಮಾರ್ ನೆನಪಿಸಿದ್ದಾರೆ:

  • ಪಾದಾಚಾರಿಗಳಿಗೆ ತೊಂದರೆಯಾಗದಂತೆ ನೊಂದಾಯಿತ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ.
  • ನಗರದ ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಸಂಪೂರ್ಣ ನಿಷೇಧ.
  • ರಾತ್ರಿ ವೇಳೆ ರಸ್ತೆಯಲ್ಲೇ ನಿಲ್ಲಿಸುವ ವ್ಯಾಪಾರದ ಗಾಡಿಗಳ ಕಡ್ಡಾಯ ತೆರವು.
  • ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೂ ಅಧಿಕೃತ ಗುರುತಿನ ಚೀಟಿ (ID tags) ವಿತರಣೆ ಮತ್ತು ಕಡ್ಡಾಯ.

ರಾಜಕೀಯ ಲಾಭಕ್ಕಾಗಿ ನಾಟಕ

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವತಿಯಿಂದ ಜುಲೈ 1, 2026 ರಂದು ಆರಂಭವಾಗಿರುವ ಈ ಅಭಿಯಾನವು ಸುಪ್ರೀಂ ಕೋರ್ಟ್ ಆದೇಶದನ್ವಯ ಪಾದಾಚಾರಿಗಳ ಹಕ್ಕುಗಳನ್ನು ರಕ್ಷಿಸುವ ಗುರಿ ಹೊಂದಿದೆ. ನಗರದ ಸಾವಿರಾರು ಕಿಲೋಮೀಟರ್ ಫುಟ್‌ಪಾತ್‌ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.

“ಅಂದು ನಾಲ್ಕು ಗೋಡೆಗಳ ಮಧ್ಯೆ ಸಭೆಯಲ್ಲಿ ತಲೆಯಾಡಿಸಿ ಒಪ್ಪಿಗೆ ಕೊಟ್ಟು, ಇಂದು ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ನಿಂತು ನಾಟಕವಾಡುತ್ತಿರುವ ಬಿಜೆಪಿಯ ಇಬ್ಬಂದಿತನವನ್ನು ಜನ ಗಮನಿಸುತ್ತಿದ್ದಾರೆ. ಸ್ವಾರ್ಥ ರಾಜಕಾರಣ ಅವರದ್ದಾದರೆ, ಜನಪರ ಹಾಗೂ ವ್ಯವಸ್ಥಿತ ಬೆಂಗಳೂರು ನಿರ್ಮಾಣವೇ ನಮ್ಮ ಧ್ಯೇಯ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳ ಸ್ಥಳಾಂತರದ ಕುರಿತು ಕೆಲವು ಕಳವಳಗಳಿದ್ದರೂ, ಯೋಜಿತ ರೀತಿಯಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ.