S Shorts

Horrible Accident | ಯಾತ್ರೆಗೆ ಹೊರಟಿದ್ದ ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ದಾರುಣ ಸಾ*ವು!

Horrible Accident | ಯಾತ್ರೆಗೆ ಹೊರಟಿದ್ದ ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ದಾರುಣ ಸಾ*ವು!
Author: Sagaradventure
Posted By: Sagaradventure
Updated: Jul 3, 2026 | 1:08 PM

ಥೈಲ್ಯಾಂಡ್‌ನ ಈಶಾನ್ಯ ಭಾಗದಲ್ಲಿರುವ ಮುಕ್ದಹಾನ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರ ಹಾಗೂ ಮನಕಲಕುವ ರಸ್ತೆ ಅಪಘಾತವೊಂದು ಸಂಭವಿಸಿದೆ. ಹೆತ್ತವರ ಗಮನಕ್ಕೆ ತಾರದೆ 11 ವರ್ಷದ ಬಾಲಕನೊಬ್ಬ ಕಾರು ಚಲಾಯಿಸಿಕೊಂಡು ಬಂದು, ರಸ್ತೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದ ಬೌದ್ಧ ಸನ್ಯಾಸಿಗಳ ಗುಂಪಿಗೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಈ ಘೋರ ದುರಂತದಲ್ಲಿ ಒಂಬತ್ತು ಮಂದಿ ಬೌದ್ಧ ಸನ್ಯಾಸಿಗಳು ಪ್ರಾಣ ಕಳೆದುಕೊಂಡಿದ್ದು, ಹಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಣ್ಣೆದುರೇ ಘಟಿಸಿದ ಘೋರ ದುರಂತ

ಸುಮಾರು 35 ಸನ್ಯಾಸಿಗಳು ಹಾಗೂ ಐವರು ಸಾಮಾನ್ಯ ಅನುಯಾಯಿಗಳ ಗುಂಪು ತೀರ್ಥಯಾತ್ರೆಗಾಗಿ ಮುಕ್ದಹಾನ್ ಪ್ರಾಂತ್ಯದ ರಸ್ತೆಯಲ್ಲಿ ಸಾಗುತ್ತಿತ್ತು. ಘಟನೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಫ್ರಾ ಸೋಂಪಾಂಗ್ ಎಂಬ ಸನ್ಯಾಸಿ ಅಪಘಾತದ ತೀವ್ರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತಾವೆಲ್ಲರೂ ‘ಬುದ್ಧೋ, ಬುದ್ಧೋ’ ಎಂದು ಧ್ಯಾನ ಮಂತ್ರವನ್ನು ಜಪಿಸುತ್ತಾ ಹೆಜ್ಜೆ ಹಾಕುತ್ತಿದ್ದಾಗ ಬಾಲಕ ಚಲಾಯಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಅತಿ ವೇಗದಲ್ಲಿ ತಮ್ಮ ಸಾಲಿಗೆ ಅಪ್ಪಳಿಸಿತು ಎಂದು ಅವರು ವಿವರಿಸಿದ್ದಾರೆ. 

ಮುಂದಿದ್ದ ಮೊದಲ ಒಂಬತ್ತು ಸನ್ಯಾಸಿಗಳು ಅಪಾಯದಿಂದ ಪಾರಾದರು, ಆದರೆ ಹಿಂದಿನ ಸಾಲಿನಲ್ಲಿದ್ದವರು ಕಾರು ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದರು ಎಂದು ಅವರು ಕಣ್ಣೀರಿಡುತ್ತಾ ಸ್ಮರಿಸಿದ್ದಾರೆ. ಅಪಘಾತದ ತೀವ್ರತೆಗೆ ಐವರು ಸನ್ಯಾಸಿಗಳು ಸ್ಥಳದಲ್ಲೇ ಮೃ*ತಪಟ್ಟರೆ, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಮತ್ತು ಇತರ ಮೂವರ ಸ್ಥಿತಿ ಗಂಭೀರವಾಗಿದೆ.

ಪೋಷಕರಿಗೆ ತಿಳಿಯದೆ ಕಾರು ತಂದಿದ್ದ ಬಾಲಕ

ಪೊಲೀಸರು ನೀಡಿರುವ ಪ್ರಾಥಮಿಕ ತನಿಖೆಯ ಮಾಹಿತಿಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಬಾಲಕನ ಮನೆಯಲ್ಲಿ ಯಾರೂ ಇರಲಿಲ್ಲ. ಆತ ಅಸ್ವಸ್ಥನಾಗಿದ್ದ ಕಾರಣ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದನು. ಇದೇ ಸಂದರ್ಭವನ್ನು ಬಳಸಿಕೊಂಡು ಆತ ಹೆತ್ತವರಿಗೆ ತಿಳಿಸದೆ ಕಾರಿನ ಕೀ ತೆಗೆದುಕೊಂಡು ರಸ್ತೆಗಿಳಿದಿದ್ದನು. ಕಾರು ಕಾಣೆಯಾಗಿರುವುದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ದೂರು ನೀಡಲು ಮುಂದಾಗುವಷ್ಟರಲ್ಲೇ ಈ ಭೀಕರ ದುರಂತ ಸಂಭವಿಸಿತ್ತು. ಆತ ವಿಶೇಷ ಅಗತ್ಯವಿರುವ ಬಾಲಕ ಎಂದು ತಿಳಿದುಬಂದಿದ್ದು, ಪ್ರಸ್ತುತ ವೈದ್ಯರು ಮತ್ತು ಪೋಷಕರ ತಂಡ ಆತನನ್ನು ನೋಡಿಕೊಳ್ಳುತ್ತಿದೆ. ವಾಹನವನ್ನು ಸದ್ಯ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ರಕ್ತದಾನಕ್ಕೆ ಆಸ್ಪತ್ರೆ ಮನವಿ ಮತ್ತು ಗವರ್ನರ್ ಎಚ್ಚರಿಕೆ

ಥೈಲ್ಯಾಂಡ್‌ನಲ್ಲಿ ಬೌದ್ಧ ಸನ್ಯಾಸಿಗಳನ್ನು ಅತ್ಯಂತ ಪವಿತ್ರವಾಗಿ ಹಾಗೂ ಗೌರವದಿಂದ ಕಾಣಲಾಗುತ್ತದೆ. ಹೀಗಾಗಿ ಈ ಅನಿರೀಕ್ಷಿತ ದುರ್ಘಟನೆಯು ಇಡೀ ದೇಶವನ್ನು ತಲ್ಲಣಗೊಳಿಸಿದೆ. ಗಾಯಗೊಂಡ ಸನ್ಯಾಸಿಗಳ ಪ್ರಾಣ ಉಳಿಸಲು ತುರ್ತಾಗಿ ರಕ್ತದಾನ ಮಾಡುವಂತೆ ಮುಕ್ದಹಾನ್ ಆಸ್ಪತ್ರೆಯು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದೆ. ಈ ದುರಂತದ ಕುರಿತು ಪ್ರತಿಕ್ರಿಯಿಸಿರುವ ಮುಕ್ದಹಾನ್ ಪ್ರಾಂತ್ಯದ ಗವರ್ನರ್ ವೊರಾಯನ್ ಬುನ್ನಾರತ್ ಅವರು, ಈ ಘಟನೆಯು ಇಡೀ ದೇಶದ ರಸ್ತೆ ಸುರಕ್ಷತೆಗೆ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ನಿಗಾ ಇಡುವುದು ಎಷ್ಟು ಮುಖ್ಯ ಎಂಬುದಕ್ಕೆ ಇದೊಂದು ಕಣ್ಣು ತೆರೆಸುವ ಪಾಠವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.