ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಕೇಳಿಬರುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಈ ಬಾರಿಯೂ ನಾನೇ ರಾಜ್ಯ ಬಜೆಟ್ ಮಂಡಿಸುತ್ತೇನೆ” ಎಂದು ಸ್ಪಷ್ಟಪಡಿಸುವ ಮೂಲಕ ಕುರ್ಚಿ ಬದಲಾವಣೆಯ ಎಲ್ಲಾ ಊಹಾಪೋಹಗಳಿಗೆ ಪರೋಕ್ಷವಾಗಿ ತೆರೆ ಎಳೆದಿದ್ದಾರೆ. ಬಜೆಟ್ ಮಂಡನೆಯಾಗುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಖಡಕ್ ಸಂದೇಶವನ್ನು ಅವರು ರವಾನಿಸಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಮಾತನಾಡಿದ ಸಿಎಂ, “ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾದರೂ, ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಇಂದಿನಿಂದ ಹೊಸ ವರ್ಷ ಆರಂಭವಾಗುತ್ತದೆ. 2026ರ ವರ್ಷವು ರಾಜ್ಯಕ್ಕೆ ಸಮೃದ್ಧಿಯನ್ನು ತರಲಿ, ರೈತರು ಮತ್ತು ಬಡವರ ಬದುಕಿನಲ್ಲಿ ಸಂತಸ ಮೂಡಲಿ” ಎಂದು ಹಾರೈಸಿದರು.
ಬಜೆಟ್ ಸಿದ್ಧತೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ತಿಂಗಳಿನಿಂದಲೇ (ಜನವರಿ) ಬಜೆಟ್ ಸಿದ್ಧತಾ ಕಾರ್ಯವನ್ನು ಆರಂಭಿಸುವುದಾಗಿ ತಿಳಿಸಿದರು. ಸಾಮಾನ್ಯವಾಗಿ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯನವರು ಡಿಸೆಂಬರ್ ತಿಂಗಳಲ್ಲೇ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದರು. ಆದರೆ ಈ ಬಾರಿ ಜನವರಿಯಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.
