ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಹಿಳೆಯೊಬ್ಬರು ಗಂಭೀರವಾದ ಜೀವ ಬೆದರಿಕೆ ಆರೋಪ ಮಾಡಿದ್ದು, ತಮಗೆ ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ. ಆದರೆ, ಈ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿರುವ ಸರ್ವೋಚ್ಚ ನ್ಯಾಯಾಲಯ, “ರಾಜಕೀಯ ಹೋರಾಟಗಳನ್ನು ಕೋರ್ಟ್‌ನಲ್ಲಿ ಮಾಡಬೇಡಿ” ಎಂದು ಕಟ್ಟುನಿಟ್ಟಾಗಿ ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆ ವೇಳೆ ಮಹಿಳೆಯ ಪರ ವಕೀಲರು ನ್ಯಾಯಪೀಠದ ಮುಂದೆ ವಾದ ಮಂಡಿಸಿ, “ಸಿಎಂ ಸಿದ್ದರಾಮಯ್ಯ ಅವರಿಂದ ನನ್ನ ಕಕ್ಷಿದಾರರಿಗೆ ಪ್ರಾಣಭಯವಿದೆ. ಅವರ ಬೆದರಿಕೆಯಿಂದಾಗಿ ಕರ್ನಾಟಕಕ್ಕೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಸದ್ಯ ಪ್ರಾಣಭಯದಿಂದಲೇ ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಕರ್ನಾಟಕದಲ್ಲಿರುವ ತಮ್ಮ ಸ್ವಂತ ಮನೆಗೂ ಹೋಗಲು ಬಿಡದೆ ಅವರಿಗೆ ಅಡ್ಡಿಪಡಿಸಲಾಗುತ್ತಿದೆ” ಎಂದು ಮಹಿಳೆಯ ಅಳಲನ್ನು ನ್ಯಾಯಾಲಯದ ಮುಂದೆ ತೆರೆದಿಟ್ಟರು.
ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಮಹಿಳೆಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. “ನಿಮಗೆ ಬೆದರಿಕೆ ಹಾಕಲು ಸಿದ್ದರಾಮಯ್ಯ ಅವರು ದೆಹಲಿಗೆ ಜನ ಕಳಿಸಿದ್ದಾರೆಯೇ?” ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ, “ನೀವು ರಾಜಕೀಯ ವ್ಯಕ್ತಿಯಂತೆ ಕಾಣುತ್ತಿದ್ದೀರಿ, ದಯವಿಟ್ಟು ನಿಮ್ಮ ರಾಜಕೀಯ ಹೋರಾಟಗಳನ್ನು ಕೋರ್ಟ್‌ನಲ್ಲಿ ಮಾಡಬೇಡಿ” ಎಂದು ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ತಮ್ಮ ಕಕ್ಷಿದಾರರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದು ಸ್ಪಷ್ಟನೆ ನೀಡಲು ಯತ್ನಿಸಿದರು.
ಅಂತಿಮವಾಗಿ, ಮಹಿಳೆಯ ಮನವಿಯನ್ನು ಪುರಸ್ಕರಿಸದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ. ನಿಮಗೆ ಭದ್ರತೆ ಅಥವಾ ರಕ್ಷಣೆಯ ಅಗತ್ಯವಿದ್ದರೆ, ಅದರ ಪರಿಹಾರಕ್ಕಾಗಿ ಸಂಬಂಧಪಟ್ಟ ಹೈಕೋರ್ಟ್ ಮೆಟ್ಟಿಲೇರುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.
