S Shorts

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240 CCTV ಕೇಬಲ್‌ ಕಟ್‌ ಪ್ರಕರಣ: ಸಂಬಳ ನೀಡದ್ದಕ್ಕೆ ಸೇಡು ತೀರಿಸಿಕೊಂಡ ಸಿಬ್ಬಂದಿ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240 CCTV ಕೇಬಲ್‌ ಕಟ್‌ ಪ್ರಕರಣ: ಸಂಬಳ ನೀಡದ್ದಕ್ಕೆ ಸೇಡು ತೀರಿಸಿಕೊಂಡ ಸಿಬ್ಬಂದಿ!
Author: Savina Naik
Posted By: Savina Naik
Updated: Apr 27, 2026 | 2:38 PM

ಬೆಂಗಳೂರು:  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ ದಿನವೇ 240ಕ್ಕೂ ಹೆಚ್ಚು ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ   ವಿಧ್ವಂಸಕ ಕೃತ್ಯದ ಹಿಂದೆ  ‘ಸಂಬಳ ನೀಡದ’ ಕೋಪವಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಕೃತ್ಯ ಎಸಗಿದ ಆರೋಪಿಗಳಾದ ಶ್ರೀನಿವಾಸ ಮತ್ತು ಅಬ್ದುಲ್ ಕಲಾಂ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಇಬ್ಬರೂ ಆರೋಪಿಗಳು ಕ್ರೀಡಾಂಗಣದಲ್ಲಿ ಸಿಸಿಟಿವಿ ಮತ್ತು ಕೇಬಲ್ ಅಳವಡಿಕೆಯ ಸಬ್ ಕಾಂಟ್ರಾಕ್ಟ್  ಪಡೆದಿರುವ ‘ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್’  ಕಂಪನಿಯ ಸಿಬ್ಬಂದಿಯಾಗಿದ್ದರು.

ತನಿಖಾ ಮೂಲಗಳ ಪ್ರಕಾರ, ‘ಐವಿಎಸ್ ಡಿಜಿಟಲ್’ ಕಂಪನಿಯು ಈ ಇಬ್ಬರು ಸಿಬ್ಬಂದಿಗಳಿಗೆ ಕಳೆದ ಕೆಲ ತಿಂಗಳುಗಳಿಂದ ಸಂಬಳ ನೀಡಿರಲಿಲ್ಲ. ಸಂಬಳ ಕೇಳಿದರೂ ಸಿಗದಿದ್ದಕ್ಕೆ ಕೋಪಗೊಂಡ ಶ್ರೀನಿವಾಸ ಮತ್ತು ಅಬ್ದುಲ್ ಕಲಾಂ, ಕಂಪನಿಗೆ ಮತ್ತು ಕ್ರೀಡಾಂಗಣದ ಆಡಳಿತ ಮಂಡಳಿಗೆ ಪಾಠ ಕಲಿಸಲು   ಸಿಸಿಟಿವಿ ನಿಯಂತ್ರಣ ಕೊಠಡಿ ಮತ್ತು ಇತರ ಪ್ರಮುಖ ಸಂಪರ್ಕ ಕೇಂದ್ರಗಳನ್ನು ತಲುಪಿ 240ಕ್ಕೂ ಹೆಚ್ಚು ಕೇಬಲ್‌ಗಳನ್ನು ಕತ್ತರಿಸಿ ಸಿಸಿಟಿವಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.

ಕೃತ್ಯ ಎಸಗಿದ ಶ್ರೀನಿವಾಸ ಮತ್ತು ಅಬ್ದುಲ್ ಕಲಾಂ ಇಬ್ಬರಿಗೂ ನೋಟಿಸ್ ನೀಡಿರುವ ಪೊಲೀಸರು ಅವರನ್ನು ವಿಚಾರಣೆಗೆ ಕರೆದಿದ್ದಾರೆ.

ನಡೆದಿದ್ದೇನು?:

ಏಪ್ರಿಲ್ 24 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಪಂದ್ಯದ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪ್ರಮುಖ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ಗಳನ್ನು ಉದ್ದೇಶಪೂರ್ವಕವಾಗಿ ಕತ್ತರಿಸಿ ಹಾಳುಮಾಡಲಾಗಿತ್ತು. 35 ಸಾವಿರ ಪ್ರೇಕ್ಷಕರು ಸೇರುವ ಕ್ರೀಡಾಂಗಣದಲ್ಲಿ ಇಂತಹ ಕೃತ್ಯ ಎಸಗಿರುವುದು ಭಾರೀ ಭದ್ರತಾ ಲೋಪವನ್ನು ಎತ್ತಿ ತೋರಿಸಿತ್ತು.