S Shorts

Cockroach ಪಾರ್ಟಿಗೆ ಕೌಂಟರ್: ಕಾಫಿನಾಡಲ್ಲಿ ಹುಟ್ಟಿಕೊಳ್ತು ‘HIT’ ಮತ್ತು ‘ಲಕ್ಷ್ಮಣರೇಖೆ’ ಪಾರ್ಟಿ!

Cockroach ಪಾರ್ಟಿಗೆ ಕೌಂಟರ್: ಕಾಫಿನಾಡಲ್ಲಿ ಹುಟ್ಟಿಕೊಳ್ತು ‘HIT’ ಮತ್ತು ‘ಲಕ್ಷ್ಮಣರೇಖೆ’ ಪಾರ್ಟಿ!
Author: Sagaradventure
Posted By: Sagaradventure
Updated: May 22, 2026 | 9:00 PM

ಚಿಕ್ಕಮಗಳೂರು: ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ’ (Cockroach Party) ಟ್ರೆಂಡ್‌ಗೆ ಪ್ರತಿಯಾಗಿ, ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೊಸದೊಂದು ಕೌಂಟರ್ ಪಾರ್ಟಿ ಜನ್ಮತಾಳಿದೆ. ಕಾಕ್ರೋಚ್ (ಜಿರಳೆ) ಹಾವಳಿಯನ್ನು ತಡೆಯಲು ಮಲೆನಾಡಿನ ಯುವಕರು ‘ಲಕ್ಷ್ಮಣರೇಖೆ’ ಹಾಗೂ ‘ಹಿಟ್’ (HIT) ಎಂಬ ವಿನೂತನ ಡಿಜಿಟಲ್ ಪಕ್ಷವನ್ನು ಸ್ಥಾಪಿಸುವ ಮೂಲಕ ಇಂಟರ್‌ನೆಟ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷರಾಗಿ ಬಾಳೆಹೊನ್ನೂರಿನ ಯುವಕನ ಆಯ್ಕೆ! 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ಎಂಬುವವರು ಈ ‘ಹಿಟ್’ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಕ್ರೋಚ್ ಪಾರ್ಟಿಗೆ ಡಿಜಿಟಲ್ ತಿರುಗೇಟು ನೀಡುವ ಏಕೈಕ ಉದ್ದೇಶದಿಂದಲೇ ಹುಟ್ಟಿಕೊಂಡಿರುವ ಈ ವಿಭಿನ್ನ ಹಾಗೂ ಹಾಸ್ಯಭರಿತ ಪಕ್ಷಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಆರಂಭವಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ನೆಟ್ಟಿಗರು ‘ಹಿಟ್’ ಪಾರ್ಟಿಯನ್ನು ಫಾಲೋ ಮಾಡಲು ಶುರುಮಾಡಿದ್ದಾರೆ.

‘ಜಿರಳೆಗಳಿಗೆ ನಾವ್ಯಾರು ಹೆದರುವುದಿಲ್ಲ’ ಅಭಿಯಾನ 

ಒಂದೆಡೆ ಕಾಕ್ರೋಚ್ ಪಾರ್ಟಿ ಬೆಂಬಲಿಗರು ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಹಿಟ್ ಪಾರ್ಟಿ ಬೆಂಬಲಿಗರು ಕೂಡ ಆಕ್ರಮಣಕಾರಿಯಾಗಿ ಪ್ರಚಾರಕ್ಕಿಳಿದಿದ್ದಾರೆ. ‘ಜಿರಳೆಗಳಿಗೆ ನಾವ್ಯಾರು ಹೆದರುವುದಿಲ್ಲ’ ಎಂಬ ಹೊಸ ಟ್ರೆಂಡಿಂಗ್ ಅಭಿಯಾನವನ್ನು ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮುನ್ನೆಲೆಗೆ ತರುವ ಮೂಲಕ ಜಿರಳೆ ಪಡೆಯ ಕಾಲೆಳೆಯುತ್ತಿದ್ದಾರೆ.

ಜಿರಳೆಗಳ ಶಮನಕ್ಕೆ ಸದಾ ಸಿದ್ಧ: 

ತಮ್ಮ ನೂತನ ಪಕ್ಷದ ಕಾರ್ಯತಂತ್ರದ ಬಗ್ಗೆ ಪ್ರತಿಕ್ರಿಯಿಸಿರುವ ‘ಹಿಟ್’ ಪಕ್ಷದ ಸಂಸ್ಥಾಪಕ ಜಗದೀಶ್ಚಂದ್ರ, “ಮನೆಗಳಿಗೆ ಜಿರಲೆಗಳು ಬಂದರೆ ಅವುಗಳನ್ನು ಶಮನ ಮಾಡಲು ನಾವು ಹಿಟ್ ಅಥವಾ ಲಕ್ಷ್ಮಣರೇಖೆ ಬಳಸಲು ಸದಾ ಸಿದ್ಧರಿದ್ದೇವೆ” ಎಂದು ವಿಡಂಬನಾತ್ಮಕವಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಅಲ್ಲದೆ, ದೇಶದಲ್ಲಿ ‘ಕಾಕ್ರೋಚ್ ಪಾರ್ಟಿ’ ಅಸ್ತಿತ್ವದಲ್ಲಿ ಇರುವಷ್ಟು ದಿನವೂ, ತಮ್ಮ ‘ಹಿಟ್’ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಕಡ್ಡಾಯವಾಗಿ ಲಕ್ಷ್ಮಣರೇಖೆ ಹಾಗೂ ಹಿಟ್ ಔಷಧಿಯನ್ನು ಬಳಸಬೇಕು ಎಂದು ಅವರು ಕರೆ ನೀಡಿದ್ದಾರೆ. ಸದ್ಯ ಮಲೆನಾಡಿನ ಈ ಕೌಂಟರ್ ಡಿಜಿಟಲ್ ರಾಜಕೀಯವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಭರಪೂರ ಮನರಂಜನೆ ಒದಗಿಸುತ್ತಿದೆ.