ಬೆಂಗಳೂರು ದಕ್ಷಿಣ: ಹಾರೋಹಳ್ಳಿ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಇಂದು (ಜೂನ್ 26) ಭೀಕರ ನಾಡಬಾಂಬ್ ಸ್ಫೋಟ ಸಂಭವಿಸಿದೆ. ತೋಟದ ಮನೆಯ ಮುಂಭಾಗದ ಗೇಟ್ ಬಳಿ ದುಷ್ಕರ್ಮಿಗಳು ಅಳವಡಿಸಿದ್ದ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ, ವಕೀಲರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಮಾಡುತ್ತಿರುವ ಎನ್.ಸಿ. ಮೋಹನ್ ಎಂಬುವವರೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರು. ಇವರು ಸುಣ್ಣಘಟ್ಟ ಗ್ರಾಮದ ಜಮೀನಿನಲ್ಲಿ ಫಾರ್ಮ್‌ಹೌಸ್ ಕಟ್ಟಿಕೊಂಡಿದ್ದು, ಆಗಾಗ ತೋಟಕ್ಕೆ ಬಂದು ಹೋಗುತ್ತಿದ್ದರು. ಇಂದು ಮುಂಜಾನೆ ಅವರು ಎಂದಿನಂತೆ ತೋಟಕ್ಕೆ ಬಂದು ಮನೆಯ ಮುಂಭಾಗದ ಮುಖ್ಯ ಗೇಟ್ ತೆರೆಯಲು ಮುಂದಾಗಿದ್ದಾರೆ. ಈ ವೇಳೆ ಗೇಟ್ ಬಳಿ ಅಡಗಿಸಿಡಲಾಗಿದ್ದ ನಾಡಬಾಂಬ್ ದಿಢೀರನೆ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ವಕೀಲ ಮೋಹನ್ ಅವರನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಕೋನದಲ್ಲಿ ಕೋಡಿಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
