S Shorts

Davanagere Bypoll | ಇಂದು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ನಾಮಪತ್ರ ಸಲ್ಲಿಕೆ; ಸಿಎಂ, ಡಿಸಿಎಂ ಭಾಗಿ!

Davanagere Bypoll | ಇಂದು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ನಾಮಪತ್ರ ಸಲ್ಲಿಕೆ; ಸಿಎಂ, ಡಿಸಿಎಂ ಭಾಗಿ!
Author: Meghana Gowda
Posted By: Meghana Gowda
Updated: Mar 23, 2026 | 10:41 AM

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಷ್ಠ ಮಟ್ಟ ತಲುಪಿವೆ. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಸಮರ್ಥ ಶಾಮನೂರು (Samarth Shamanur) ಅವರು ಇಂದು ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಶಾಮನೂರು ಅವರು ಇಂದು ಅಧಿಕೃತವಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM Siddaramaiah and DCM DK Shivakumar) ಅವರ ಸಮ್ಮುಖದಲ್ಲಿ ಸಮರ್ಥ ನಾಮಪತ್ರ ಸಲ್ಲಿಸಲಿದ್ದಾರೆ.  ಬೆಳಿಗ್ಗೆ 11:30ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲಿದೆ. ನಿನ್ನೆಯಷ್ಟೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಪುತ್ರನ ಪರವಾಗಿ ಬಿ-ಫಾರಂ ಪಡೆದುಕೊಂಡಿದ್ದರು.

ತ್ರಿಕೋನ ಸ್ಪರ್ಧೆಯ ಆತಂಕ:

ಇಂದು ಕೇವಲ ಕಾಂಗ್ರೆಸ್ ಮಾತ್ರವಲ್ಲದೆ, ಇತರ ಪ್ರಮುಖ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸುತ್ತಿರುವುದು ಕುತೂಹಲ ಮೂಡಿಸಿದೆ. ಬಿಜೆಪಿ ಅಭ್ಯರ್ಥಿ ಟಿ. ಶ್ರೀನಿವಾಸ ದಾಸಕರಿಯಪ್ಪ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಹಾಗೂ   ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್ ಅವರು ಬಂಡಾಯ ಅಭ್ಯರ್ಥಿಯಾಗಿ ಇಂದು ನಾಮಿನೇಷನ್ ಫೈಲ್ ಮಾಡಲಿದ್ದಾರೆ. ಇದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ.