ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಪ್ರತಿದಿನ ಕೋಟಿ ಕೋಟಿ ಹಣ ಸುರಿಯುತ್ತಿದೆ. ಆದರೆ ಈ ಹಣ ಎಲ್ಲಿಗೆ ಹೋಗುತ್ತಿದೆ? ಹೇಗೆ ಬಳಕೆಯಾಗುತ್ತಿದೆ ಎಂಬ ಮಾಹಿತಿ ಮಾತ್ರ ಜನಸಾಮಾನ್ಯರಿಗೆ ನಿಲುಕುತ್ತಿಲ್ಲ. ‘ಜನಾಗ್ರಹ’ ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ವರದಿಯು ನಗರದ ಆರ್ಥಿಕ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಬೆಂಗಳೂರಿನ ಮೂಲಸೌಕರ್ಯಕ್ಕಾಗಿ ಪ್ರತಿನಿತ್ಯ ಸರಾಸರಿ 100 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ವಾರ್ಷಿಕವಾಗಿ ಸಾರ್ವಜನಿಕ ವೆಚ್ಚವೆಂದು ಬರೋಬ್ಬರಿ 38,455 ಕೋಟಿ ರೂಪಾಯಿ ವ್ಯಯವಾಗುತ್ತಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ 13 ಸಂಸ್ಥೆಗಳ ಪೈಕಿ ಕೇವಲ 3 ಸಂಸ್ಥೆಗಳು (BDA, BWSSB, BMRDA) ಮಾತ್ರ ತಮ್ಮ ಖರ್ಚು-ವೆಚ್ಚದ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ. ಉಳಿದ 10 ಸಂಸ್ಥೆಗಳು ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ.
ಒಟ್ಟು ಖರ್ಚಿನ ಶೇ. 20 ರಷ್ಟನ್ನು ಬಿಬಿಎಂಪಿ (BBMP) ಮಾಡುತ್ತಿದ್ದರೆ, ಉಳಿದ ಶೇ. 80 ರಷ್ಟು ಭಾರಿ ಮೊತ್ತವನ್ನು BWSSB, BESCOM ಮತ್ತು BMTC ಸಂಸ್ಥೆಗಳು ಭರಿಸುತ್ತಿವೆ. 70ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿದ ನಂತರ ‘ಜನಾಗ್ರಹ’ ಸಂಸ್ಥೆ ಈ ಅಂಕಿ-ಅಂಶಗಳನ್ನು ನೀಡಿದೆ. ಆಘಾತಕಾರಿ ವಿಷಯವೆಂದರೆ, ಈ ಬೃಹತ್ ಮೊತ್ತದ ಖರ್ಚಿಗೆ ಸರಿಯಾದ ದಾಖಲೆಗಳೇ ಲಭ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಗರದ ತೆರಿಗೆದಾರರ ಹಣ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಖರ್ಚಾಗುತ್ತಿದ್ದರೂ, ಅದರ ಫಲಿತಾಂಶ ಮಾತ್ರ ಜನರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
