S Shorts

Davanagere Bypoll | ಶಾಮನೂರು ಸಾಮ್ರಾಜ್ಯಕ್ಕೆ ಮೊಮ್ಮಗನೇ ವಾರಸುದಾರ? ಪುತ್ರನ ಪರ ಸಂಸದೆ ಪ್ರಭಾ ಮಲ್ಲಿಕಾರ್ಜುನ್​ ಲಾಬಿ

Davanagere Bypoll | ಶಾಮನೂರು ಸಾಮ್ರಾಜ್ಯಕ್ಕೆ ಮೊಮ್ಮಗನೇ ವಾರಸುದಾರ? ಪುತ್ರನ ಪರ ಸಂಸದೆ ಪ್ರಭಾ ಮಲ್ಲಿಕಾರ್ಜುನ್​ ಲಾಬಿ
Author: Meghana Gowda
Posted By: Meghana Gowda
Updated: Mar 18, 2026 | 1:14 PM

ದಾವಣಗೆರೆ: ಹಿರಿಯ ರಾಜಕೀಯ ಧುರೀಣ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಣ ಈಗ ರಂಗೇರಿದೆ. ಟಿಕೆಟ್ ಘೋಷಣೆಯ ಮೊದಲೇ ಶಾಮನೂರು ಕುಟುಂಬದ ಮೂರನೇ ತಲೆಮಾರಿನ ಕುಡಿ ಸಮರ್ಥ ಶಾಮನೂರು( Samarth Shamanur) ಅಧಿಕೃತವಾಗಿ ಅಖಾಡಕ್ಕಿಳಿಯುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ.

 ದೇವಸ್ಥಾನದಿಂದಲೇ ರೌಂಡ್ಸ್ ಆರಂಭಿಸಿದ ಸಮರ್ಥ:

ಬುಧವಾರ ಅಮಾವಾಸ್ಯೆಯ ವಿಶೇಷ ದಿನದಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಶಾಮನೂರು ಸಕ್ರಿಯ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಬೆಳ್ಳಂಬೆಳಿಗ್ಗೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಮರ್ಥ, ನಂತರ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಜನಸಾಮಾನ್ಯರ ಜೊತೆ ಬೆರೆತರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸುವ ಮೂಲಕ ಚುನಾವಣಾ ಪೂರ್ವ ತಯಾರಿ ಆರಂಭಿಸಿದ್ದಾರೆ. “ತಾತ ಮತ್ತು ಅಪ್ಪನ ಜೊತೆ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಕೆಲಸ ಮಾಡಿದ್ದೇನೆ, ಇಲ್ಲಿನ ಜನ ನನಗೆ ಹೊಸಬರಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ತಾಯಿಯ ‘ಟಿಕೆಟ್’ ಫೈಟ್:

ಇತ್ತ ದಾವಣಗೆರೆಯಲ್ಲಿ ಮಗ ಗ್ರೌಂಡ್ ವರ್ಕ್ ಆರಂಭಿಸಿದ್ದರೆ, ಅತ್ತ ದೆಹಲಿಯ ಕರ್ನಾಟಕ ಭವನದಲ್ಲಿ ತಾಯಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ (Prabha Mallikarjun) ಅವರು ಟಿಕೆಟ್‌ಗಾಗಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಪ್ರಭಾ, “ದಾವಣಗೆರೆ ದಕ್ಷಿಣ ನಮ್ಮ ಕುಟುಂಬದ ಭದ್ರಕೋಟೆ. ಇಲ್ಲಿ ಸಮರ್ಥನಿಗೆ ಟಿಕೆಟ್ ನೀಡಿ, ಆತನನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು” ಎಂದು ಪಟ್ಟು ಹಿಡಿದಿದ್ದಾರೆ. ಪ್ರಭಾ ಅವರ ಮನವಿಯನ್ನು ಆಲಿಸಿದ ಡಿ.ಕೆ. ಶಿವಕುಮಾರ್, ವರಿಷ್ಠರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಎದುರಾಗಲಿದೆಯೇ ಬಂಡಾಯದ ಬಿಸಿ?

ಶಾಮನೂರು ಕುಟುಂಬದ ಈ ದಿಢೀರ್ ನಡೆ ಕಾಂಗ್ರೆಸ್‌ನ ಇತರ ಆಕಾಂಕ್ಷಿಗಳಲ್ಲಿ ಸಂಚಲನ ಮೂಡಿಸಿದೆ. ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತುತ್ತಿರುವ ಮುಸ್ಲಿಂ ಸಮುದಾಯದ ನಾಯಕರು ಮತ್ತು ಇತರ ಮೂಲ ಕಾಂಗ್ರೆಸ್ಸಿಗರನ್ನು ಸಮಾಧಾನಪಡಿಸುವುದು ಈಗ ಹೈಕಮಾಂಡ್ ಮುಂದಿರುವ ಅತಿದೊಡ್ಡ ಸವಾಲು.