ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು, ರಾಜ್ಯದ ಚುನಾವಣಾ ಅಖಾಡದಿಂದ ಅಂತರ ಕಾಯ್ದುಕೊಂಡು ಕೇರಳದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ಕೈತಪ್ಪುವ ಆತಂಕವನ್ನು ಹಾಗೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿಗಳು ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ದಾವಣಗೆರೆಯ ರಾಜಕೀಯ ವಸ್ತುಸ್ಥಿತಿಯನ್ನು ಗ್ರಹಿಸಿದ ಸಿಎಂ, ಕೂಡಲೇ ರಾಜ್ಯಕ್ಕೆ ವಾಪಸಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ತುರ್ತು ಸೂಚನೆ (ಬುಲಾವ್) ನೀಡಿದ್ದಾರೆ.
ಸಿಎಂ ಸೂಚನೆ ಮೇರೆಗೆ ಇಂದು ಕೇರಳದಿಂದ ಹುಬ್ಬಳ್ಳಿಗೆ ಆಗಮಿಸಲಿರುವ ಜಮೀರ್ ಅಹಮದ್, ಅಲ್ಲಿಂದ ನೇರವಾಗಿ ಸಚಿವ ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ತೆರಳಿ ಭೋಜನ ಸವಿಯಲಿದ್ದಾರೆ. ಈ ಮೂಲಕ ಸಚಿವ ಮಲ್ಲಿಕಾರ್ಜುನ್ ಜೊತೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಅಲ್ಪಸಂಖ್ಯಾತ ಮತಗಳನ್ನು ಮತ್ತೆ ಕಾಂಗ್ರೆಸ್ ಪರವಾಗಿ ಕ್ರೋಢೀಕರಿಸಲು ಮತ್ತು ಪಕ್ಷದೊಳಗಿನ ಆಂತರಿಕ ಬಂಡಾಯವನ್ನು ಶಮನಗೊಳಿಸಲು ಅವರು ಇಂದಿನಿಂದಲೇ ಬಿರುಸಿನ ಪ್ರಚಾರ ಆರಂಭಿಸಲಿದ್ದಾರೆ.
