S Shorts

ಬೆಂಗಳೂರಿನಲ್ಲಿ ‘Bulldozer Raj’ ಇಲ್ಲ, ಸತ್ಯ ತಿಳಿಯದೆ ಮೂಗು ತೂರಿಸಬೇಡಿ: ಕೇರಳ ಸಿಎಂ ಪಿಣರಾಯಿಗೆ ಡಿಕೆಶಿ ಖಡಕ್ ತಿರುಗೇಟು!

ಬೆಂಗಳೂರಿನಲ್ಲಿ ‘Bulldozer Raj’ ಇಲ್ಲ, ಸತ್ಯ ತಿಳಿಯದೆ ಮೂಗು ತೂರಿಸಬೇಡಿ: ಕೇರಳ ಸಿಎಂ ಪಿಣರಾಯಿಗೆ ಡಿಕೆಶಿ ಖಡಕ್ ತಿರುಗೇಟು!
Author: Sagaradventure
Posted By: Sagaradventure
Updated: Dec 27, 2025 | 11:06 AM

ಬೆಂಗಳೂರು: ಯಲಹಂಕದ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಉತ್ತರ ಪ್ರದೇಶದ ‘ಬುಲ್ಡೋಜರ್ ಸಂಸ್ಕೃತಿ’ಗೆ ಹೋಲಿಸಿ ಟೀಕಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ಸತ್ಯಾಸತ್ಯತೆ ಅರಿಯದೇ ನಮ್ಮ ರಾಜ್ಯದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು,” ಎಂದು ಡಿಕೆಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಿಣರಾಯಿ ವಿಜಯನ್ ಅವರಂತಹ ಹಿರಿಯ ನಾಯಕರು ವಾಸ್ತವ ತಿಳಿಯದೆ ಮಾತನಾಡಿರುವುದು ದುರಾದೃಷ್ಟಕರ. ಅದು ಘನತ್ಯಾಜ್ಯ ವಿಲೇವಾರಿಗಾಗಿ ಮೀಸಲಿಟ್ಟ ಕ್ವಾರಿ ಪಿಟ್ ಜಾಗವಾಗಿದ್ದು, ಅಲ್ಲಿ ಆರೋಗ್ಯ ಸಮಸ್ಯೆಗಳು ತಲೆದೋರುತ್ತಿವೆ. 9 ವರ್ಷಗಳ ಹಿಂದೆಯೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಹೀಗಿದ್ದರೂ ಲ್ಯಾಂಡ್ ಮಾಫಿಯಾದವರು ಸ್ಲಂಗಳನ್ನು ಸೃಷ್ಟಿಸಲು ನಾವು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಉತ್ತರ ಪ್ರದೇಶದ ಮಾದರಿಯ ಬುಲ್ಡೋಜರ್ ರಾಜ್ ನಡೆಯುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಡಿಕೆಶಿ, “ನಮ್ಮಲ್ಲಿ ಬುಲ್ಡೋಜರ್ ಸಂಸ್ಕೃತಿ ಇಲ್ಲ. ಆದರೆ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಅಲ್ಲಿ ನೆಲೆಸಿದ್ದವರಲ್ಲಿ ಕೆಲವರು ಮಾತ್ರ ಸ್ಥಳೀಯರಾಗಿದ್ದು, ಉಳಿದವರು ಏಕಾಏಕಿ ಅತಿಕ್ರಮಣ ಮಾಡಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಅವರಿಗೆ ಸ್ಥಳಾಂತರಕ್ಕೆ ಅವಕಾಶ ನೀಡಲಾಗಿತ್ತು” ಎಂದರು.

ಸ್ಥಳೀಯ ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅರ್ಹ ಬಡವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ. ಆದರೆ ಖಾಲಿ ಜಾಗ ಕಂಡ ತಕ್ಷಣ ಗುಡಿಸಲು ಹಾಕಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕೆಲವರು ಇಂತಹ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.

ಈ ವಿಷಯದ ಕುರಿತು ನಮ್ಮ ಪಕ್ಷ ಹಾಗೂ ಕೇರಳದ ನಾಯಕರಿಗೆ ಸತ್ಯಾಂಶದ ವರದಿಯನ್ನು ರವಾನಿಸುವುದಾಗಿ ತಿಳಿಸಿದ ಡಿಸಿಎಂ, ಯಾರೆಲ್ಲಾ ಕರ್ನಾಟಕದಲ್ಲಿ ವಾಸವಿದ್ದು ಸೂಕ್ತ ದಾಖಲೆ ಹೊಂದಿದ್ದಾರೋ ಅವರಿಗೆ ಕಾನೂನಿನಂತೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.