ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರು ಕೋಟ್ಯಂತರ ರೂಪಾಯಿ ಬೆಲೆಬಾಳುವ ‘ಬ ಖರಾಬು’ ಜಮೀನಿನ ದಾಖಲೆ ತಿದ್ದುಪಡಿ ಮಾಡಿಕೊಡಲು ಬರೋಬ್ಬರಿ 50 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಧಾರವಾಡ ಮತ್ತು ಕಲಘಟಗಿ ಮಾರ್ಗಮಧ್ಯೆ ಇರುವ ಯರಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿರುವ 33 ಎಕರೆ ಜಮೀನಿನ ಪೈಕಿ 13 ಎಕರೆ ಭೂಮಿಯು ಬ ಖರಾಬು ಆಗಿತ್ತು. ಈ ದಾಖಲೆಯನ್ನು ಮಾರ್ಪಾಟು ಮಾಡಿಕೊಡಲು 50 ಲಕ್ಷ ರೂಪಾಯಿ ಲಂಚದ ಜೊತೆಗೆ, ಅದೇ ಜಮೀನಿನಲ್ಲಿ 2 ಎಕರೆ ಭೂಮಿಯನ್ನು ಗುಳುಂ ಮಾಡಲು ತಹಶೀಲ್ದಾರ್ ಹೊಂಚು ಹಾಕಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕರ್ನಾಟಕ ಕಾಲೇಜು ಆವರಣದಲ್ಲಿ ಟ್ರ್ಯಾಪ್
ಬಾಗಲಕೋಟೆ ಮೂಲದ ಮಂಜುನಾಥ ಅರಳಿಕಟ್ಟಿ ಎಂಬುವವರು ಧಾರವಾಡದ ಯರಿಕೊಪ್ಪ ಹದ್ದಿನಲ್ಲಿ ಈ ಜಮೀನನ್ನು ಖರೀದಿಸಿದ್ದರು. ಈ ಜಮೀನಿನ ಬ ಖರಾಬು ಪಹಣಿ ಸರಿಪಡಿಸುವಂತೆ ಕೋರಿದಾಗ ತಹಶೀಲ್ದಾರ್ ದೊಡ್ಡ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಜುನಾಥ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಅಧಿಕಾರಿಗಳು, ಬುಧವಾರ ರಾತ್ರಿ ಕರ್ನಾಟಕ ಕಾಲೇಜು ಆವರಣದಲ್ಲಿಯೇ ಲಂಚದ ಹಣ ಪಡೆಯುವಾಗ ಸಚ್ಚಿದಾನಂದ ಕುಚನೂರು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೋಕಾಯುಕ್ತ ಎಸ್.ಪಿ.ಸಿದ್ದಲಿಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ
ತಕ್ಷಣವೇ ಎಚ್ಚೆತ್ತುಕೊಂಡ ಲೋಕಾಯುಕ್ತ ಎಸ್.ಪಿ. ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡವು ಭ್ರಷ್ಟ ಅಧಿಕಾರಿಯನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ. ಈ ಕ್ಷಿಪ್ರ ದಾಳಿಯ ವೇಳೆ ದೂರುದಾರರು ಕೂಡ ಅಧಿಕಾರಿಗಳ ಜೊತೆಗಿದ್ದರು.
ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ರವೀಂದ್ರ ಕುರುಬಗಟ್ಟಿ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಪ್ರಸಾದ್, ಕರುಣೇಶಗೌಡ ಮತ್ತು ಪ್ರಸಾದ ಪಾನೇಕರ್ ಸೇರಿದಂತೆ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಜರುಗಿಸುತ್ತಿದ್ದಾರೆ.
